ನಾನು ನಿಜವಾಗಿಯೂ ಚಹಾ ಮಾರಾಟಗಾರ: ಲಾಲು ಪ್ರಸಾದ್
ನರೇಂದ್ರ ಮೋದಿ ಅವರಂತೆ ನಾನು ಕೂಡ ಚಹಾ ಮಾರಾಗಾರರೆಂದು ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಮುಜಾಫರಪುರ/ಪಾಟ್ನಾ: ನರೇಂದ್ರ ಮೋದಿ ಅವರಂತೆ ನಾನು ಕೂಡ ಚಹಾ ಮಾರಾಗಾರರೆಂದು ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಬಿಜೆಪಿ ನರೇಂದ್ರ ಮೋದಿ ಅವರ ಮೋದಿ ಚಾಯ್ ಕಾರ್ಯಕ್ರಮ ಯಶಸ್ವಿಯಾಗಿದ್ದೇ ತಡ ಎಲ್ಲ ರಾಜಕೀಯ ಪಕ್ಷಗಳು ಟೀ ಮತ್ತು ಹಾಲಿನ ಹಿಂದೆ ಬಿದ್ದಿವೆ. ಮೋದಿ ಚಹಾ ಅಂಗಡಿ ತೆರೆದ ಬೆನ್ನಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರಿನಲ್ಲಿ 'ರಾಹುಲ್ ಮಿಲ್ಕ್' ತೆರೆದಿದ್ದರು. ಇದೀಗ ಮಾಜಿ ರೇಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಅವರ ಸರದಿ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕೂಡ ನರೇಂದ್ರ ಮೋದಿ ಅವರಂತೆ ಚಹಾ ಅಂಗಡಿ ತೆರೆದಿದ್ದು, ತಾವು ನಿಜವಾಗಿಯೂ ಚಹಾ ಮಾರಾಟಗಾರನೆಂದು ಹೇಳಿಕೊಂಡಿದ್ದಾರೆ. ಅಲ್ಲದೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಾವು ಚಹಾ ಮಾರಾಟಗಾರನೆಂದು ಸುಳ್ಳು ಹೇಳುತ್ತಿದ್ದಾರೆಂದು ಆರೋಪಿಸಿದ್ದಾರೆ. ಲಾಲು ಪ್ರಸಾದ್ ಅವರ ಹೇಳಿಕೆಯನ್ನು ಬೆಂಬಲಿಸಿರುವ ಆರ್ ಜೆಡಿ ಪಕ್ಷ, ನರೇಂದ್ರ ಮೋದಿ ಅವರು ಚಿಕ್ಕವಯಸ್ಸಿನಲ್ಲಿ ಟೀ ಮಾರಾಟಗಾರರಾಗಿದ್ದರು ಎಂಬುದು ಸುಳ್ಳು. ಲಾಲು ಪ್ರಸಾದ್ ಅವರು ನಿಜವಾಗಿಯೂ ಚಹಾ ಮಾರುತ್ತಿದ್ದರು. ಲಾಲು ಪ್ರಸಾದ್ ಯಾದವ್ ಮತ್ತು ಅವರ ಸಹೋದರ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಚಹಾ ಮಾರಾಟ ಮಾಡಿ ಸಂಪಾದಿಸುತ್ತಿದ್ದರು ಎಂದು ಹೇಳಿದೆ.
ಈಗಾಗಲೇ ಪಾಟ್ನಾದಾದ್ಯಂತ 'ಲಾಲು ಚಾಯ್ ದುಕಾನ್' ಗಳು ಪ್ರಾರಂಭಗೊಂಡಿದ್ದು, ನೂರಾರು ಕಾರ್ಯಕರ್ತರು ಅವುಗಳ ಮೇಲ್ವಿಚಾರಣೆಯಲ್ಲಿ ತೊಡಗಿದ್ದಾರೆ. 'ನಾವು ಪ್ರತಿ ದಿನ ಸಂಜೆ ರಾಜ್ಯಾದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು 'ಲಾಲು ಚಾಯ್ ದುಕಾನ್'ಗಳನ್ನು ತೆರೆದಿದ್ದು, ಚಹಾದೊಂದಿಗೆ ಬಿಸ್ಕತ್‌ಗಳನ್ನು ಜನರಿಗೆ ಹಂಚುತ್ತಿದ್ದೇವೆ. ಅಲ್ಲದೆ ನರೇಂದ್ರ ಮೋದಿ ಅವರ ಕುರಿತ ನಿಜವಾದ ಸತ್ಯಗಳನ್ನು ಜನತೆಗೆ ತಿಳಿಸುತ್ತಿದ್ದೇವೆ' ಎಂದು 'ಲಾಲು ಚಾಯ್ ದುಕಾನ್' ಕಾರ್ಯಕ್ರಮ ಆಯೋಜಕ ಇಕ್ಬಾಲ್ ಶಮಿ ಹೇಳಿದ್ದಾರೆ.
ಒಟ್ಟಾರೆ ನರೇಂದ್ರ ಮೋದಿ ಅವರ 'ಚಾಯ್ ಪೇ ಚರ್ಚಾ' ಕಾರ್ಯಕ್ರಮ ಯಶಸ್ವಿಯಾಗಿದ್ದೇ ತಡ, ಎಲ್ಲ ರಾಜಕೀಯ ಪಕ್ಷಗಳು ಅದನ್ನು ಹಿಂಬಾಲಿಸುತ್ತಿವೆ. ಒಂದು ಹಂತದಲ್ಲಿ ಚಹಾ ಮಾರಾಟಗಾರನೆಂದು ಮೂದಲಿಸುತ್ತಿದ್ದ ರಾಜಕಾರಣಿಗಳು ಇದೀಗ ಸ್ವತಃ ತಾವೇ ಚಹಾ ಮಾರಾಟಗಾರರೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇದೀಗ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕೂಡ ಮತ ಬೇಟೆಗಾಗಿ ಚಹಾ ಹಿಂದೆ ಬಿದಿದ್ದಾರೆ.