ಸದ್ಯಕ್ಕೆ ಲೋಕಪಾಲ್ ಮಸೂದೆ ಮಂಡನೆ ಇಲ್ಲ: ಸಿಎಂ ಸಿದ್ದು
ಲೋಕಪಾಲ ಮಸೂದೆಯನ್ನು ಸದ್ಯಕ್ಕೆ ಮಂಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಮೈಸೂರು: ಲೋಕಪಾಲ ಮಸೂದೆಯನ್ನು ಸದ್ಯಕ್ಕೆ ಮಂಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಕೆಲ ತಾಂತ್ರಿಕ ಕಾರಣಗಳಿಂದಾಗಿ ನಾಳೆ ಲೋಕಪಾಲ ಮಸೂದೆಯನ್ನು ಮಂಡಿಸುತ್ತಿಲ್ಲ ಎಂದು ಸ್ಫಷ್ಟಪಡಿಸಿದ್ದಾರೆ. ಇದೇ ವೇಳೆ ರಾಮದಾಸ್ ಪ್ರೇಮ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಮದಾಸ್ ಅವರು ತಮಗೆ ಬರೆದಿರುವ ಪತ್ರ ಇನ್ನೂ ದೊರೆತಿಲ್ಲ. ಪತ್ರ ದೊರೆತ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಪ್ರಸ್ತುತ ಸಚಿವ ಮತ್ತು ಶಾಸಕರು ಸ್ಪರ್ಧಿಸುವ ಕುರಿತು ವಿಚಾರಿಸಿದಾಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕೆಲ ಸಚಿವ ಮತ್ತು ಶಾಸಕರು ಸ್ಪರ್ಧಿಸುವ ಕುರಿತು ಮಾಹಿತಿ ಇದೆ. ಆದರೆ 2 ಕ್ಷೇತ್ರಗಳಲ್ಲಿ ಮಾತ್ರ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಿದರು.
'ಅಂಬಿ'ಗೇನು ಆಗಿಲ್ಲ, ಅವರು ಹುಷಾರಾಗಿದ್ದಾರೆ
ಇದೇ ವೇಳೆ ವಸತಿ ಸಚಿವ ಮತ್ತು ನಟ ಅಂಬರೀಷ್ ಅವರ ಆರೋಗ್ಯದ ಕುರಿತು ಮಾತನಾಡಿ ಸಿದ್ಧರಾಮಯ್ಯ ಅವರು, ಅಂಬರೀಷ್ ಅವರಿಗೇನು ಆಗಿಲ್ಲ. ನಾನು ವಿಕ್ರಮ್ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿದ್ದೇನೆ. ಇನ್ನು 2-3 ದಿನಗಳಲ್ಲಿ ಅವರು ಹುಷಾರಾಗುತ್ತಾರೆ ಎಂದು ತಿಳಿಸಿದ್ದಾರೆ. ಯಾರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಶೀಘ್ರವೇ ಅವರು ಗುಣಮುಖರಾಗಿ ಬರಲಿದ್ದಾರೆ ಎಂದು ಸಿದ್ಧರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.