13 ಶಾಸಕರ ರಾಜಿನಾಮೆ; 1 ಗಂಟೆಯಲ್ಲಿ 5 ಮಂದಿಯ ನಿರ್ಧಾರ ಬದಲು
ಗಂಟೆಯ ಹಿಂದಷ್ಟೇ ಆರ್ಜೆಡಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದ 13 ಶಾಸಕರ ಪೈಕಿ 5 ಮಂದಿ ತಮ್ಮ ರಾಜಿನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ.
ಪಾಟ್ನಾ: ಗಂಟೆಯ ಹಿಂದಷ್ಟೇ ಆರ್ಜೆಡಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದ 13 ಶಾಸಕರ ಪೈಕಿ 5 ಮಂದಿ ತಮ್ಮ ರಾಜಿನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ.
ಆರ್ಜೆಡಿ ಪಕ್ಷದ ಮುಖಂಡ ಲಾಲು ಪ್ರಸಾದ್ ಯಾದವ್ ಅವರ ಓಲೈಕೆಯಿಂದಾಗಿ ಐವರು ಶಾಸಕರು ತಮ್ಮ ರಾಜಿನಾಮೆಯನ್ನು ಹಿಂಪಡೆದಿದ್ದಾರೆ.
ತಮ್ಮ ಪಕ್ಷದ 13 ಶಾಸಕರು ರಾಜಿನಾಮೆ ನೀಡುವ ಕುರಿತು ಮಾತನಾಡಿದ್ದ ಪಕ್ಷದ ಮುಖಂಡ ಲಾಲು ಪ್ರಸಾದ್ ಯಾದವ್ ಅವರು, ಈ ಬಗ್ಗೆ ತಮಗೇನು ತಿಳಿದಿಲ್ಲ. ಕೂಡಲೇ ನಾನು ಶಾಕರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದರು. ಇದೀಗ ಅವರ ಮಾತುಕತೆ ಯಶಸ್ವಿಯಾಗಿದ್ದು 13 ಶಾಸಕರ ಪೈಕಿ 5 ಮಂದಿ ಪಕ್ಷಕ್ಕೆ ವಾಪಸ್ಸಾಗಿದ್ದಾರೆ.
ಜೆಡಿಯುನತ್ತ ಮುಖ ಮಾಡಿದ್ದ ಶಾಸಕರು
ಇದೇ ವೇಳೆ ಆರ್ ಜೆಡಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತೊರೆದಿರುವ ಶಾಸಕರು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಸೇರಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಅತೃಪ್ತ ಶಾಸಕರ ಗುಂಪು ಈಗಾಗಲೇ ಜೆಡಿಯು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.