ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕೆಸಿಆರ್

ತೆಲಂಗಾಣದಲ್ಲಿ ರಾಜಕೀಯ ಗರಿಗೆದರಿದ್ದು, ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

Srinivasa Murthy VN
Updated On : 24 Feb 2014, 3:03 am

ನವದೆಹಲಿ: ತೆಲಂಗಾಣ ಮಸೂದೆ ಮಂಡನೆ ನಂತರ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ರಾಜಕೀಯ ಗರಿಗೆದರಿದ್ದು, ಸೋಮವಾರ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಮೂಲಗಳ ಪ್ರಕಾರ ಈ ಇಬ್ಬರು ನಾಯಕರು ಇಂದು ನವೆದೆಹಲಿಯ ಕಾಂಗ್ರೆಸ್ ಭವನದಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಭೆಯಲ್ಲಿ ಏನು ಚರ್ಚಿಸಲಾಗಿದೆ ಎಂಬುದನ್ನು ಉಭಯ ನಾಯಕರು ಬಿಟ್ಟುಕೊಟ್ಟಿಲ್ಲ. ಆದರೆ ಟಿಆರ್‌ಎಸ್ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಾರಿ ಉತ್ಸುಕತೆ ತೋರುತಿದ್ದು, ಇದಕ್ಕೆ ಟಿಆರ್‌ಎಸ್ ಪಕ್ಷದ ಕಡೆಯಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗುತ್ತಿಲ್ಲ.

ಲೋಕಸಭಾ ಚುನಾವಣೆಗೂ ಮೊದಲೇ ಟಿಆರ್‌ಎಸ್ ಪಕ್ಷವನ್ನು ವಿಲೀನಗೊಳಿಸುವುದು ಕಾಂಗ್ರೆಸ್ ತಂತ್ರವಾದರೆ, ಲೋಕಸಭಾ ಚುನಾವಣೆಯ ನಂತರವೇ ಕಾಂಗ್ರೆಸ್‌ನಲ್ಲಿ ವಿಲೀನವಾಗುವಂತಿದೆ ಟಿಆರ್‌ಎಸ್. ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ ರಾಜಕೀಯ ಪಂಡಿತರ ಪ್ರಕಾರ, ಲೋಕಸಭಾ ಚುನಾವಣೆಗೂ ಮೊದಲೇ ಟಿಆರ್‌ಎಸ್ ಅನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿಕೊಂಡರೆ ತೆಲಂಗಾಣ ರಾಜ್ಯ ರಚನೆಯ ಸಂಪೂರ್ಣ ಶ್ರೇಯ ಕಾಂಗ್ರೆಸ್‌ಗೆ ಸಲ್ಲುತ್ತದೆ. ಆ ಮೂಲಕ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಟಗೊಳಿಸಿಕೊಂಡು ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ ಇಡಬಹುದು ಮತ್ತು ಹೆಚ್ಚು ಸ್ಥಾನ ಗಳಿಸುವುದು ಸೋನಿಯಾ ಗಾಂಧಿ ಅವರ ಲೆಕ್ಕಚಾರವಾಗಿದೆ.

ಅಂತೆಯೇ ಇದೀಗ ತಾನೇ ತೆಲಂಗಾಣ ರಾಜ್ಯ ರಚನೆಗೆ ಸಂಸತ್ತಿನ ಉಭಯ ಸದನಗಳು ಒಪ್ಪಿಗೆ ನೀಡಿವೆ. ಇದರ ಸಂಪೂರ್ಣ ಕೀರ್ತಿಯನ್ನು ತಮ್ಮ ಪಕ್ಷದ ಶ್ರಮದ ಫಲವೆಂದು ಬಿಂಬಿಸಿಕೊಂಡು ಆ ಮೂಲಕ ಲೋಕಭೆಯಲ್ಲಿ ಟಿಆರ್‌ಎಸ್ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲು ಹವಣಿಸುತ್ತಿದೆ. ಇಷ್ಟೇ ಅಲ್ಲದೆ ಒಂದು ವೇಳೆ ಟಿಆರ್‌ಎಸ್ ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಗಿ ಕೇಂದ್ರದಲ್ಲಿ ಮತ್ತೆ ಯುಪಿಎ ಅಧಿಕಾರಕ್ಕೆ ಬಂದರೆ ಆಗ ಸೂಕ್ತ ಸ್ಥಾನಮಾನ ಕೇಳಲು ಮತ್ತು ನೂತನ ತೆಲಂಗಾಣ ರಾಜ್ಯಕ್ಕೆ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲು ನೆರವಾಗುತ್ತದೆ ಎಂಬುದು ಕೆ.ಚಂದ್ರಶೇಖರ ರಾವ್ ಅವರ ಲೆಕ್ಕಚಾರ. ಹೀಗಾಗಿಯೇ ಅವರು ವಿಲೀನ ಕಾರ್ಯವನ್ನು ಲೋಕಸಭಾ ಚುನಾವಣೆಯ ವರೆಗೂ ತಡೆಯಲು ಶತ ಪ್ರಯತ್ನ ನಡೆಸುತ್ತಿದ್ದಾರೆ.

ಒಟ್ಟಾರೆ ತೆಲಂಗಾಣ ಭಾಗದಲ್ಲಿ ಒಟ್ಟು 17 ಲೋಕಸಭಾ ಕ್ಷೇತ್ರಗಳಿದ್ದು, ಹೆಚ್ಚು ಕ್ಷೇತ್ರಗಳಿಗಾಗಿ ಉಭಯ ಪಕ್ಷಗಳು ಪರೋಕ್ಷ ಸೆಣಸಾಟ ಆರಂಭಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement