ಮುಸ್ಲಿಮರ ಕ್ಷಮೆ ಕೋರಲು ಸಿದ್ಧ: ರಾಜನಾಥ್ ಸಿಂಗ್
ಗುಜರಾತ್ ಕೋಮು ಗಲಭೆ ಕುರಿತು ಮುಸ್ಲಿಮರ ಕ್ಷಮೆ ಕೋರಿರುವ ರಾಜನಾಥ್ ಸಿಂಗ್ ಅವರು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ನವದೆಹಲಿ: 2002ರ ಗುಜರಾತ್ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ಕ್ಷಮೆ ಕೋರಿರುವ ಬಿಜೆಪಿ ರಾಷ್ಟ್ರಾದ್ಯಕ್ಷ ರಾಜನಾಥ್ ಸಿಂಗ್ ಅವರು ಲೋಕಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ನಡೆದ '272 ಪ್ಲಸ್: ಮುಸ್ಲಿಮರ ಪಾತ್ರ' ಎಂಬ ಕಾರ್ಯಕ್ರಮದಲ್ಲಿ ಗುಜರಾತ್ ಕೋಮು ಗಲಭೆಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಈ ಹಿಂದೆ ನಮ್ಮಿಂದೇನಾದರೂ ತಪ್ಪಾಗಿದೆ ಎಂದೆನಿಸದರೆ, ನಾವು ಜನತೆಯಲ್ಲಿ ತಲೆ ತಗ್ಗಿಸಿ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದರು.
'ನರೇಂದ್ರ ಮೋದಿ ಅವರ ವಿಚಾರ ಬಂದಾಗಲೆಲ್ಲಾ 2002ರ ಗುಜರಾತ್ ಕೋಮುಗಲಭೆಯನ್ನೇ ಕೆಲವರು ಕೇಂದ್ರವಾಗಿಸಿಕೊಳ್ಳುತ್ತಾರೆ. ಮೋದಿ ಮುಖ್ಯಮಂತ್ರಿಯಾಗುವುದಕ್ಕೂ ಮೊದಲು ಗುಜರಾತ್ನಲ್ಲಿ ಕೋಮು ಗಲಭೆಗಳೇ ನಡೆದಿರಲಿಲ್ಲವೇ. ಹಿತೇಂದ್ರ ದೇಸಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಕೋಮುಗಲಭೆ ಕುರಿತು ಯಾರೂ ಏಕೆ ಮಾತನಾಡುವುದಿಲ್ಲ ಎಂದು ರಾಜನಾಥ್ ಸಿಂಗ್ ಅವರು ಪರೋಕ್ಷವಾಗಿ ಕಾಂಗ್ರೆಸ್ಗೆ ಚುಚ್ಚಿದರು.
'ದೇಶವನ್ನು ಇಬ್ಭಾಗ ಮಾಡಲಿಚ್ಛಿಸುವವರೇ ಕೋಮುವಾದಿಗಳು. ನಾವು ಅಧಿಕಾರಕ್ಕಾಗಿ ರಾಜಕೀಯ ಮಾಡಲು ಬಂದಿಲ್ಲ. ದೇಶ ನಿರ್ಮಾಣ ಮಾಡಲು ರಾಜಕಾರಣ ಮಾಡುತ್ತಿದ್ದೇವೆ' ಎಂದು ಹೇಳಿದರು.