ಇಡೀ ವಿಶ್ವಕ್ಕೆ ಉಚಿತ ವೈಫೈ: ಇದು ಅಮೆರಿಕ ಕನಸು
ವಿಜ್ಞಾನಿಗಳ ತಂಡವೊಂದು ಇಡೀ ವಿಶ್ವಕ್ಕೆ ವೈಫೈ ವ್ಯವಸ್ಥೆಯನ್ನು ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡಿದ್ದು, ವರ್ಷದೊಳಗೆ ಉಚಿತ ವೈಫೈ ಸೇವೆ ನೀಡುವ ಭರವಸೆ ಹೊಂದಿದೆ.
ನ್ಯೂಯಾರ್ಕ್: ಅಮೆರಿಕದ ವಿಜ್ಞಾನಿಗಳ ತಂಡವೊಂದು ಇಡೀ ವಿಶ್ವಕ್ಕೆ ವೈಫೈ ವ್ಯವಸ್ಥೆಯನ್ನು ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡಿದ್ದು ನಿಗದಿಯಂತೆ ಎಲ್ಲವೂ ನಡೆದರೆ 1 ವರ್ಷದೊಳಗಾಗಿ ವಿಶ್ವಾದ್ಯಂತ ಉಚಿತ ವೈಫೈ ಸೇವೆ ಆರಂಭಗೊಳ್ಳಲಿದೆ.
ನೆಲ ಮಾರ್ಗದ ಇಂಟರ್‌ನೆಟ್ ಸೇವೆ ದುಬಾರಿಯಾಗಿರುವ ಈ ಕಾಲದಲ್ಲಿ ಆಕಾಶ ಮಾರ್ಗದಲ್ಲಿ ಉಚಿತವಾಗಿ ಇಂಟರ್‌ನೆಟ್ ಸೇವೆ ಒದಗಿಸಲು ಅಮೆರಿಕದ ಸಂಸ್ಥೆಯೊಂದು ನಿರ್ಧರಿಸಿದೆ. ಇದಕ್ಕಾಗಿ ಬಾಹ್ಯಾಕಾಶಕ್ಕೆ ಉಪಗ್ರಹಗಳ ಗುಚ್ಛ (cube satellites constellation)ವನ್ನು ಹಾರಿಬಿಟ್ಟು ಆ ಮೂಲಕ ಇಡೀ ವಿಶ್ವಕ್ಕೆ ವೈಫೈ ಸೇವೆ ನೀಡುವುದು Media Development Investment Fund (MDIF) ಸಂಸ್ಥೆಯ ಯೋಜನೆಯಾಗಿದೆ.
ವಿಶ್ವದ ಮೂಲೆ ಮೂಲೆಗೆ ವೈಫೈ ಸೇವೆಯನ್ನು ಪಸರಿಸಿ ಆ ಮೂಲಕ ಸೆನ್ಸಾರ್ ರಹಿತ ಇಂಟರ್‌ನೆಟ್ ಸೇವೆ ನೀಡಬೇಕು ಎನ್ನುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು MDIF ಸಂಸ್ಥೆ ಹೇಳಿಕೊಂಡಿದೆ. ಈ ಉದ್ದೇಶಿತ ಯೋಜನೆಗೆ ಸುಮಾರು 3 ಲಕ್ಷ ಬಿಲಿಯನ್ ಹಣ ಖರ್ಚಾಗುವ ಸಾಧ್ಯತೆ ಇದ್ದು, ಈಗಾಗಲೇ MDIF ಸಂಸ್ಥೆ ಬಂಡಾವಳದ ಕ್ರೋಢೀಕರಣದಲ್ಲಿ ತೊಡಗಿದೆ. ಮುಂದಿನ ಬೇಸಿಗೆ ವೇಳೆಗೆ ಅಷ್ಟು ಪ್ರಮಾಣದ ಬಂಡವಾಳ ದೊರೆಯುವ ಸಾಧ್ಯತೆ ಇದ್ದು, ಹಣ ಸಿಗುತ್ತಿದ್ದಂತೆಯೇ ಉಪಗ್ರಹಗಳನ್ನು ಆಕಾಶಕ್ಕೆ ಹಾರಿ ಬಿಡುತ್ತೇವೆ ಎಂದು MDIF ಸಂಸ್ಥೆ ಹೇಳಿದೆ.
ಅಮೆರಿಕ ಮೂಲದ MDIF ಸಂಸ್ಥೆಯ ಈ ಯೋಜನೆ ಜಾರಿಗೆ ಬಂದಿದ್ದೇ ಆದರೆ ಜಗತ್ತಿನಲ್ಲಿ ದೊಡ್ಡ ಮಟ್ಟದ ತಂತ್ರಜ್ಞಾನ ಕ್ರಾಂತಿಗೆ ಸಂಸ್ಥೆ ನಾಂದಿ ಹಾಡಿದಂತಾಗುತ್ತದೆ. ಅಲ್ಲದೆ ಈ ಯೋಜನೆಯ ಮೂಲಕ ಸಂಸ್ಥಗೆ ಬಾರಿ ಹೆಸರು ಮತ್ತು ಅಮೆರಿಕಕ್ಕೆ ವಿಶ್ವಮಟ್ಟದಲ್ಲಿ ಶ್ರೇಯಸ್ಸು ಲಭಿಸಲಿದೆ.