ಸದ್ಯಕ್ಕೆ ಭುಲ್ಲರ್ನನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ
ಅನಾರೋಗ್ಯ ಪೀಡಿತನಾಗಿರುವ ಭುಲ್ಲರ್ನನ್ನು ಸದ್ಯಕ್ಕೆ ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸ್ಪಷ್ಟನೆ ನೀಡಿದೆ.
ನವದೆಹಲಿ: ಅನಾರೋಗ್ಯ ಪೀಡಿತನಾಗಿರುವ ದೆಹಲಿ ಸರಣಿ ಬಾಂಬ್ ಸ್ಫೋಟ ರೂವಾರಿ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ನನ್ನು ಸದ್ಯಕ್ಕೆ ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸ್ಪಷ್ಟನೆ ನೀಡಿದೆ.
ಗಲ್ಲು ಶಿಕ್ಷೆ ಪ್ರಧಾನ ವಿಳಂಬ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ಈ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಸರ್ಕಾರ, '1993ರ ದೆಹಲಿ ಬಾಂಬ್ ಸ್ಫೋಟ ಆರೋಪಿ ದೇವಿಂದರ್ ಸಿಂಗ್ ಪಾಲ್ ಬುಲ್ಲರ್ ಅನಾರೋಗ್ಯ ಪೀಡಿತನಾಗಿದ್ದು, ಸದ್ಯಕ್ಕೆ ಗಲ್ಲು ಶಿಕ್ಷೆ ಪ್ರಧಾನ ಸಾಧ್ಯವಿಲ್ಲ ಎಂದು ಹೇಳಿದೆ.
'ಅಲ್ಲದೆ ಭುಲ್ಲರ್ ಪತ್ನಿ ಸಲ್ಲಿಸಿರುವ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳ ಮುಂದಿದೆ. ದೆಹಲಿ ರಾಜ್ಯಪಾಲರಾದ ನಜೀಬ್ ಜಂಗ್ ಅವರು ಕೂಡ ಭುಲ್ಲರ್ ಗಲ್ಲು ಶಿಕ್ಷೆಯನ್ನು ಮಾರ್ಪಡಿಸುವಂತೆ ಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ಭುಲ್ಲರ್ ಗಲ್ಲು ಶಿಕ್ಷೆ ಪ್ರಧಾನ ಮಾಡುವ ಕುರಿತು ಇನ್ನೆರಡು ವಾರದಲ್ಲಿ ತನ್ನ ಅಭಿಪ್ರಾಯ ತಿಳಿಸುವುದಾಗಿ' ಕೇಂದ್ರ ಸರ್ಕಾರ ಹೇಳಿದೆ.
ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಶಿಕ್ಷೆ ಪ್ರಧಾನ ಮಾಡುವಿಕೆಯಲ್ಲಿ ವಿಳಂಬ ಧೋರಣೆ ತೋರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ ಈ ಹಿಂದೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 15 ಮಂದಿ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಜೀವಾವಧಿಗೆ ಇಳಿಸಿತ್ತು. ಇದೀಗ ಭುಲರ್ ಗಲ್ಲು ಶಿಕ್ಷೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮತ್ತೆ ಕಿಡಿ ಕಾರಿದೆ.
1993ರ ದೆಹಲಿ ಸರಣಿ ಬಾಂಬ್ ಸ್ಫೋಟದ ರೂವಾರಿಯಾಗಿರುವ ಭುಲ್ಲರ್ಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. 2003ರಲ್ಲಿ ಭುಲ್ಲರ್ ಕುಟುಂಬಸ್ಥರು ರಾಷ್ಟ್ರಪತಿಗಳ ಬಳಿ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ್ದರು. ಸಮಾರು 8 ವರ್ಷಗಳ ನಂತರ ಭುಲ್ಲರ್ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಇದೀಗ ಮತ್ತೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲಾಗಿದ್ದು, ರಾಷ್ಟ್ರಪತಿಗಳ ತೀರ್ಮಾನಕ್ಕಾಗಿ ಕಾಯಲಾಗುತ್ತಿದೆ.