'ಸಿಂಧೂ ರತ್ನ' ದುರಂತ: ನೌಕದಳದ ಮುಖ್ಯಸ್ಥ ಡಿಕೆ ಜೋಷಿ ರಾಜಿನಾಮೆ
ಜಲಾಂತರ್ಗಾಮಿ ನೌಕೆಗಳ ದುರಂತದ ನೈತಿಕ ಹೊಣೆ ಹೊತ್ತಿರುವ ನೌಕದಳದ ಮುಖ್ಯಸ್ಥ ಡಿ.ಕೆ.ಜೋಷಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನವದೆಹಲಿ: ಪದೇ ಪದೇ ಜಲಾಂತರ್ಗಾಮಿ ನೌಕೆಗಳು ದುರಂತ್ಕಕೀಡಾಗುತ್ತಿರುವ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತಿರುವ ನೌಕದಳದ ಮುಖ್ಯಸ್ಥ ಡಿ.ಕೆ.ಜೋಷಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮುಂಬೈ ಹೊರವಲಯದಲ್ಲಿ ಇಂದು ಬೆಳಗ್ಗೆ ಸಿಂಧೂರತ್ನದಲ್ಲಿ ಅಗ್ನಿ ಪ್ರಮಾದ ಉಂಟಾಗಿದ್ದು, ಘಟನೆಯಲ್ಲಿ 7 ಮಂದಿ ಗಾಯಗೊಂಡು, ಇಬ್ಬರು ಸಿಬ್ಬಂದಿಗಳು ನಾಪತ್ತೆಯಾಗಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನೌಕಾದಳದ ಮುಖ್ಯಸ್ಥ ಡಿ.ಕೆ.ಜೋಷಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈಗಾಗಲೇ ಕೇಂದ್ರ ರಕ್ಷಣಾ ಇಲಾಖೆಗೆ ಜೋಷಿ ಅವರ ರಾಜಿನಾಮೆ ತಲುಪಿದ್ದು, ಕೇಂದ್ರ ಸರ್ಕಾರ ರಾಜಿನಾಮೆಯನ್ನು ಅಂಗೀಕರಿಸಿದೆ. ಜಲಾಂತರ್ಗಾಮಿ ನೌಕೆಗಳಲ್ಲಿ ಪದೇ ಪದೇ ನಡೆಯುತ್ತಿರುವ ದುರಂತಗಳಿಗೆ ನೈತಿಕ ಹೊಣೆಹೊತ್ತು ಜೋಷಿ ಅವರು ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ.
ಪದೇ ಪದೇ ದುರಂತಕ್ಕೀಡಾಗುತ್ತಿರುವ ಸಬ್ ಮೆರಿನ್ ಗಳು
ಸಬ್ ಮೆರಿನ್ ಹೊಂದಿರುವ ರಾಷ್ಟ್ರಗಳ ಸಾಲಿಗೆ ಇತ್ತೀಚೆಗಷ್ಟೇ ಭಾರತ ಸೇರ್ಪಡೆಗೊಂಡಿದ್ದು, 2010ರಲ್ಲಿ ಆಂದ್ರಪ್ರದೇಶದಲ್ಲಿ ಐಎನ್ಎಸ್ ಸಿಂಧೂರಕ್ಷಕ್ ಸಬ್ ಮೆರಿನ್ ಅನ್ನು ಭಾರತ ಸೇನೆಗೆ ಸೇರಿಸಿತು. ಆ ಮೂಲಕ ಸಬ್ ಮೆರಿನ್ ಹೊಂದಿರುವ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಯಿತು. ಆದರೆ ಕೇವಲ 3 ವರ್ಷಗಳ ಅವಧಿಯಲ್ಲಿ ಭಾರತೀಯ ಸಬ್ ಮೆರಿನ್ ಗಳಲ್ಲಿ ಹಲವು ದುರಂತಗಳು ನಡೆದಿವೆ.
2010ರ ಫೆಬ್ರವರಿಯಲ್ಲಿ 'ಸಿಂಧೂ ರಕ್ಷಕ್'ನಲ್ಲಿ ಅಗ್ನಿ
ಆಗ ತಾನೆ ನೌಕಾಪಡೆಗೆ ಸೇರಿದ್ದ ಐಎನ್ಎಸ್ ಸಿಂಧೂರಕ್ಷಕ್ ನೌಕೆಯಲ್ಲಿ 2010ರ ಫೆಬ್ರವರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬ್ಯಾಟರಿ ಕೊಠಡಿಯಲ್ಲಿ ಬ್ಯಾಟರಿಯಲ್ಲಿದ್ದ ಹೈಡ್ರೋಜನ್ ಸೋರಿಕೆಯಾಗಿ ನೌಕೆಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಹೊತ್ತ ಸ್ವಲ್ಪ ಸಮಯದಲ್ಲಿಯೇ ನೌಕೆಯಲ್ಲಿನ ಬ್ಯಾಟರಿ ಕೊಠಡಿ ಸ್ಫೋಟಗೊಂಡಿತು. ಘಟನೆಯಲ್ಲಿ ಒರ್ವ ಸಿಬ್ಬಂದಿ ಸಾವಿಗೀಡಾಗಿ ಇಬ್ಬರು ಗಾಯಗೊಂಡಿದ್ದರು.
ಐಎನ್ಎಸ್ ಷಂಕುಶ್ ಸ್ವಚ್ಛತೆ ವೇಳೆ ದುರಂತ
2010 ಆಗಸ್ಟ್ 30 ರಂದು ಮುಂಬೈನ ಹೊರವಲಯದಲ್ಲಿ ಐಎನ್ಎಸ್ ಷಂಕುಶ್ನಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ಜಲಾಂತರ್ಗಾಮಿ ನೌಕೆಯಲ್ಲಿನ ಬ್ಬಂದಿಗಳು ನಿಯಂತ್ರಣ ಕಳೆದುಕೊಂಡರು. ಘಟನೆಯಲ್ಲಿ ನೌಕೆಯಲ್ಲಿದ್ದ ಐವರು ಅಧಿಕಾರಿಗಳು ಸೇರಿದಂತೆ ಎಲ್ಲ ಸಿಬ್ಬಂದಿಗಳು ನೀರಿನಲ್ಲಿ ಮುಳುಗಿ ಹೋಗಿದ್ದರು. ನೌಕಾದಳದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಎಲ್ಲ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಓರ್ವ ಅಧಿಕಾರಿಯನ್ನು ಉಳಿಸಲು ಹೆಲಿಕಾಪ್ಟರ್ ಸಹಾಯ ಪಡೆಯಲಾಯಿತು. ಅಧಿಕಾರಿಯ ತಲೆಗೆ ಭಾರಿ ಪೆಟ್ಟು ಬಿದ್ದಿತ್ತು. ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಸಿಂಧೂರಕ್ಷಕ್ ಸ್ಫೋಟ
2013ರ ಆಗಸ್ಟ್ 14ರಂದು ಮುಂಬೈನ ಡಾರ್ಕ್ ಯಾರ್ಡ್ನಲ್ಲಿದ್ದ ಸಿಂಧೂರಕ್ಷಕ್ ಸಬ್ ಮೆರಿನ್ ಸ್ಫೋಟಗೊಂಡು ಅದರಲ್ಲಿದ್ದ ಎಲ್ಲ 18 ಸಿಬ್ಬಂದಿಗಳು ಸಾವಿಗೀಡಾಗದ್ದರು. ನೌಕೆಗೆ ಶಸ್ತ್ರಾಸ್ತ್ರ ತುಂಬಿಸುವ ವೇಳೆ ಉಂಟಾದ ಒತ್ತಡದಿಂದಾಗಿ ಈ ಸ್ಫೋಟ ಸಂಭವಿಸಿತು ಎಂದು ಹೇಳಲಾಗುತ್ತಿದೆ. ಘಟನೆ ನಡೆದು ಒಂದು ವಾರದವರೆಗೂ ಕಾರ್ಯಚರಣೆ ನಡೆಸಿ ಸಿಬ್ಬಂದಿಗಳ ಮೃತದೇಹವನ್ನು ಹೊರತೆಗೆಯಲಾಗಿತ್ತು.