ಮತ್ತಷ್ಟು ಶಾಕ್ ಪಡೆಯಲು ಸಿದ್ಧರಾಗಿ: ಲಾಲುಗೆ ನಿತೀಶ್ ಎಚ್ಚರಿಕೆ
ಲಾಲುಪ್ರಸಾದ್ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಅವರು ಮತ್ತೆ ಶಾಕ್ ಪಡೆಯಲು ಸಿದ್ಧರಾಗಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪಾಟ್ನಾ: ಆರ್ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಅವರು ಮತ್ತೆ ಶಾಕ್ ಪಡೆಯಲು ಸಿದ್ಧರಾಗಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಆರ್ಜೆಡಿ ಪಕ್ಷದಲ್ಲಿ ಉಂಟಾದ ಭಿನ್ನಮತಕ್ಕೆ ನಿತೀಶ್ ಕುಮಾರ್ ಅವರೇ ಕಾರಣ ಎಂಬ ಲಾಲು ಪ್ರಸಾದ್ ಯಾದವ್ ಅವರ ಹೇಳಿಕೆಯ ಹಿನ್ನಲೆಯಲ್ಲಿ ಮಾತನಾಡಿದ ನಿತೀಶ್ ಕುಮಾರ್ ಅವರು, ಲಾಲು ಪ್ರಸಾದ್ ಅವರ ಶಾಕ್ಗೆ ಬೇರಾರು ಕಾರಣರಲ್ಲ. ಸ್ವತಃ ಅವರೇ ಕಾರಣ ಅಷ್ಟೇ. ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದು, ಅದನ್ನು ಸರಿಪಡಿಸದಿದ್ದರೆ ಮತ್ತಷ್ಟು ಶಾಕ್ ಪಡೆಯಬೇಕಾಗುತ್ತದೆ ಎಂದು ನಿತೀಶ್ ವ್ಯಂಗ್ಯವಾಡಿದರು.
'ನಿಮ್ಮ ಮನೆಯ ವೈರ್ಗಳನ್ನೊಮ್ಮೆ ಪರೀಕ್ಷಿಸಿ ಇಲ್ಲವಾದರೆ ಮತ್ತೆ ಶಾಕ್ಗಾಗಿ ಸಿದ್ದರಾಗಿ. ಲಾಲು ಪ್ರಸಾದ್ ಅವರು ತಮ್ಮ ಪಕ್ಷದ ಟ್ರಾನ್ಸ್ಫಾರ್ಮರ್ ಎಂದಾದರೆ, ಅದರಲ್ಲಿ ಯಾವುದೇ ತೊಂದರೆಗಳಿಲ್ಲ. ಆದರೆ ಸಮಸ್ಯೆ ಇರುವುದು ಅವರ ವೈರ್ ಕನೆಕ್ಷನ್ನಲ್ಲಿ. ಅವರು ತಮ್ಮ ಕನೆಕ್ಷನ್ ಅನ್ನು ಪರೀಕ್ಷಿಸಿ ಸರಿಪಡಿಸದಿದ್ದಲ್ಲಿ ಅವರು ಮತ್ತಷ್ಟು ಶಾಕ್ಗಳನ್ನು ಪಡೆಯಬೇಕಾಗುತ್ತದೆ. ಅವರಲ್ಲಿ ತಪ್ಪಿಟ್ಟುಕೊಂಡು ಅವರು ಬೇರೆಯವರನ್ನು ದೂಷಿಸುವುದು ಸರಿಯಲ್ಲ'.
'ಈ ಹಿಂದೆ ನಮ್ಮ ಪಕ್ಷದ ಶಾಸಕರು ಕೂಡ ಬೇರೆ ಪಕ್ಷಗಳನ್ನು ಸೇರಿದ್ದರು. ನಾವು ಇಂಥಹವುಗಳಿಗೆಲ್ಲ ಸಿದ್ಧರಿರಬೇಕು. ಹಲವು ಶಾಸಕರು ಮತ್ತು ಬೆಂಬಲಿಗರು ಜೆಡಿಯು ಪಕ್ಷವನ್ನು ಸೇರಲು ತುದಿಗಾಲಲ್ಲಿ ನಿಂತಿದ್ದು, ಅವರಿಗೆಲ್ಲ ನಮ್ಮ ಪಕ್ಷದ ವತಿಯಿಂದ ಸ್ವಾಗತವಿದೆ. ಲಾಲು ಪ್ರಸಾದ್ ಅವರು ಇದನ್ನು ಕ್ರೀಡಾಸ್ಪೂರ್ತಿಯಾಗಿ ಸ್ವೀಕರಿಸಬೇಕು' ಎಂದು ನಿತೀಶ್ ಹೇಳಿದರು.
ಇತ್ತೀಚೆಗಷ್ಟೇ 13 ಶಾಸಕರು ಆರ್ಜೆಡಿ ಪಕ್ಷವನ್ನು ತೊರೆಯಲು ಸಿದ್ಧರಾಗಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ 9 ಶಾಸಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು, ಶಾಸಕರ ರಾಜಿನಾಮೆಯ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದರು.