ಜನರಲ್ ವಿ.ಕೆ.ಸಿಂಗ್ ಬಿಜೆಪಿಗೆ ಸೇರ್ಪಡೆ
ಭೂಸೇನೆ ನಿವೃತ್ತ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ಶನಿವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ನವದೆಹಲಿ: ಭೂಸೇನೆ ನಿವೃತ್ತ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ಶನಿವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ.
ಇಂದು ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ವಿ.ಕೆ.ಸಿಂಗ್ ಅವರನ್ನು ಬಿಜೆಪಿ ರಾಷ್ಟ್ರಾದ್ಯಕ್ಷ ರಾಜನಾಥ್ ಸಿಂಗ್ ಅವರು ಹೂಗುಚ್ಛವನ್ನು ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು. ಇದಕ್ಕೂ ಮೊದಲು ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಮೆಮೋರಿಯಲ್ಗೆ ಭೇಟಿ ನೀಡಿದ್ದ ವಿ.ಕೆ.ಸಿಂಗ್ ಅವರು ಅಲ್ಲಿ ನೆರೆದಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಬಿಜೆಪಿ ಪಕ್ಷವನ್ನು ಸೇರುತ್ತಿರುವ ಕುರಿತು ಹೇಳಿಕೆ ನೀಡಿದರು.
'ಸೇನೆಯಲ್ಲಿರುವ ಪ್ರತಿಯೊಬ್ಬ ಸೈನಿಕನು ದೇಶದ ಕುರಿತು ಮಾತ್ರ ಚಿಂತಿಸುತ್ತಾನೆ. ನಾನು ಕೂಡ ದೇಶಕ್ಕೆ ನನ್ನ ಕೈಲ್ಲಾದ ಸೇವೆ ಸಲ್ಲಿಸುತ್ತೇನೆ. ನಾನು ರಾಷ್ಟ್ರೀಯ, ದೇಶವನ್ನು ಮುನ್ನಡೆಸಬಲ್ಲ ಮತ್ತು ಖಚಿತ ನಿರ್ಧಾರ ಕೈಗೊಳ್ಳುವ ಪಕ್ಷವನ್ನು ಸೇರುತ್ತಿದ್ದೇನೆ ಎಂದು ವಿ.ಕೆ.ಸಿಂಗ್ ಹೇಳಿದರು.
ಅಂತೆಯೇ ಬಿಜೆಪಿ ಸೇರಿರುವ ನೀವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಿರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೂ ತಿಳಿದಿಲ್ಲ. ನನ್ನ ಸ್ಪರ್ಧೆ ಬಗ್ಗೆ ಪಕ್ಷವೇ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.
ಕಳೆದ ವರ್ಷ ಹರ್ಯಾಣದಲ್ಲಿ ನಡೆದದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ನಿವೃತ್ತ ಜನರಲ್ ವಿ.ಕೆ.ಸಿಂಗ್ ಅವರು ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ನಂತರ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಹೋರಾಟಗಾರ ಮತ್ತು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ನಡೆಸುತ್ತಿದ್ದ ಸತ್ಯಾಗ್ರಹದಲ್ಲಿ ಸಿಂಗ್ ಪಾಲ್ಗೊಂಡಿದ್ದರು. ಆಗ ರಾಜಕೀಯ ಸೇರುವ ಸಾಧ್ಯತೆಯನ್ನು ತಳ್ಳಿಹಾಕಿದ್ದ ವಿ.ಕೆ.ಸಿಂಗ್ ಅವರು ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ರಾಖಿ ಸಾವಂತ್ ಕೂಡ ಬಿಜೆಪಿಗೆ ಸೇರ್ಪಡೆ
ಇದೇ ವೇಳೆ ಬಾಲಿವುಡ್ ನಟಿ ರಾಖಿ ಸಾವಂತ್ ಕೂಡ ನವದೆಹಲಿಯಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದು, ಇಂದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದರು. ದೆಹಲಿ ಬಿಜೆಪಿ ಮಹಿಳಾ ಘಟಕದ ಸದಸ್ಯರು ರಾಖಿ ಸಾವಂತ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.