ಹಿರಿಯ ಬಿಜೆಪಿ ಮುಖಂಡ ಬಂಗಾರು ಲಕ್ಷ್ಮಣ್ ವಿಧಿವಶ
ಬಿಜೆಪಿ ಹಿರಿಯ ಮುಖಂಡ ಬಂಗಾರು ಲಕ್ಷ್ಮಣ್ ಅವರು ವಿಧಿವಶರಾಗಿದ್ದು, ಅವರಿಗೆ 74 ವರ್ಷ ವಯಸ್ಸಾಗಿತ್ತು.
ಹೈದರಾಬಾದ್: ಬಿಜೆಪಿ ಹಿರಿಯ ಮುಖಂಡ ಬಂಗಾರು ಲಕ್ಷ್ಮಣ್ ಅವರು ವಿಧಿವಶರಾಗಿದ್ದು, ಅವರಿಗೆ 74 ವರ್ಷ ವಯಸ್ಸಾಗಿತ್ತು.
ಬಿಜೆಪಿ ಪಕ್ಷದ ಹಿರಿಯ ಮುಖಂಡ ಮತ್ತು ಮಾಜಿ ರಾಷ್ಟ್ರಾಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ವಿಧಿವರಾಗಿದ್ದು, ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ಅವರನ್ನು ಆಂಧ್ರಪ್ರದೇಶದ ಸಿಕಿಂದರಾಬಾದ್ನಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. 1996ರಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದ ಅವರು 2000-2001ರವರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದರು. ಅಲ್ಲದೆ 1999-2000ರವರೆಗೂ ರೇಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದರು.
1939 ಮಾರ್ಚ್ 17ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದ್ದ ಬಂಗಾರು ಲಕ್ಷ್ಮಣ್ ಅವರು, ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡಿದ್ದರು. 1975ರಲ್ಲಿ ದಿ.ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಆಂತರಿಕ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿ ಸೆರೆವಾಸ ಅನುಭವಿಸಿದ್ದರು.
ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸಚಿವರಾಗಿದ್ದ ಬಂಗಾರು ಲಕ್ಷ್ಮಣ್ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ತೆಹಲ್ಕಾ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದಿದ್ದರು. ಪ್ರಕರಣ ಸಂಬಂಧ 4 ವರ್ಷಗಳ ಕಾಲ ಸೆರೆವಾಸವನ್ನು ಕೂಡ ಅನುಭವಿಸಿದ್ದರು.
ಮೃತ ಬಂಗಾರು ಲಕ್ಷ್ಮಣ್ ಅವರು ಪತ್ನಿ ಸುಶೀಲಾ, ಓರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.