ಅಗ್ನಿ-4 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ
ದೇಶೀಯವಾಗಿ ತಯಾರಿಸಲಾದ ಅಗ್ನಿ-4 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಸೋಮವಾರ ಯಶಸ್ವಿಯಾಗಿ ನಡೆಸಲಾಗಿದೆ.
ಭುವನೇಶ್ವರ್: ದೇಶೀಯವಾಗಿ ತಯಾರಿಸಲಾದ ಅಗ್ನಿ-4 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಸೋಮವಾರ ಯಶಸ್ವಿಯಾಗಿ ನಡೆಸಲಾಗಿದೆ.
ಒಡಿಶಾ ರಾಜ್ಯದ ಕರಾವಳಿಯಲ್ಲಿರುವ ಮಿಲಿಟರಿ ಪ್ರದೇಶದಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಅಗ್ನಿ-4 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. ಉಡಾವಣೆಗೆಂದೇ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಮೊಬೈಲ್ ಲಾಂಚರ್ ವಾಹನದ ಮೂಲಕ ಕ್ಷಿಪಣಿಯನ್ನು ಉಡಾಯಿಸಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಲಾಗಿರುವ ಈ ಕ್ಷಿಪಣಿಯು ಸುಮಾರು 4000 ಕಿಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಅಗ್ನಿ-4 ಕ್ಷಿಪಣಿ ಕ್ಷಣಮಾತ್ರದಲ್ಲಿ ಶತ್ರು ಸೈನಿಕರನ್ನು ಧ್ವಂಸಗೊಳಿಸುವ ಶಕ್ತಿ ಹೊಂದಿದ್ದು, ಅಗ್ನಿ ಸರಣಿಯ ಕ್ಷಿಪಣಿಗಳಲ್ಲೇ ಇದು ಹೊಸ ತಲೆಮಾರಿನ ಕ್ಷಿಪಣಿಯಾಗಿದೆ.
ಒಡಿಶಾದ ಭದ್ರಕ್ ಜಿಲ್ಲೆಯ ಧಮ್ರಾ ಪ್ರದೇಶದ ಸಮೀಪವಿರುವ ದ್ವೀಪದಿಂದ ಕ್ಷಿಪಣಿಯನ್ನು ಉಡಾಯಿಸಲಾಗಿದ್ದು, ನಿಗದಿತ ಗುರಿಯನ್ನು ನಿಖರ ಸಮಯದಲ್ಲಿ ಕ್ಷಿಪಣಿ ತಲುಪಿದೆ. ಬಂಗಾಳಕೊಲ್ಲಿಯಲ್ಲಿ ನಿಗದಿ ಪಡಿಸಲಾಗಿದ್ದ ಗುರಿಯನ್ನು ಕ್ಷಿಪಣಿ ಶರವೇಗದಲ್ಲಿ ಕ್ರಮಿಸಿ ಧ್ವಂಸಗೊಳಿಸಿದೆ. ಕ್ಷಿಪಣಿ ನಿಖರ ಗುರಿ ತಲುಪಿರುವುದನ್ನು ಕರಾವಳಿಯಲ್ಲಿರುವ ರಾಡಾರ್‌ಗಳು ಪತ್ತೆ ಹಚ್ಚಿವೆ. ಸುಮಾರು 20 ಮೀಟರ್ ಉದ್ದವಿರುವ ಈ ಕ್ಷಿಪಣಿಯು 17 ಟನ್ ತೂಕವನ್ನು ಹೊಂದಿದ್ದು, ಘನ ಇಂಧನವನ್ನು ಬಳಸಿಕೊಳ್ಳುತ್ತದೆ.
ಕ್ಷಿಪಣಿ ಉಡಾವಣೆ ಯಶಸ್ವಿಯಾಗಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿರುವ ಕ್ಷಿಪಣಿ ಯೋಜನೆಯ ನಿರ್ದೇಶಕ ಎಂ.ವಿ.ಕೆ.ವಿ ಪ್ರಸಾದ್ ಅವರು, ಮಿಲಿಟರಿ ವಿಜ್ಞಾನಿಗಳಿಗೆ ಶುಭಾಶಯ ಕೋರಿದ್ದಾರೆ. ಭಾರತೀಯ ಸೇನೆಗೆ ಅಗ್ನಿ-4 ಪ್ರಮುಖ ಅಸ್ತ್ರ ಎಂದು ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.