ಏಕದಿನ ಸರಣಿ ನ್ಯೂಜಿಲೆಂಡ್ ಪಾಲು
4ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ತಂಡ ಪ್ರವಾಸಿ ಭಾರತ ತಂಡದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಹ್ಯಾಮಿಲ್ಟನ್: ಹ್ಯಾಮಿಲ್ಟನ್ನಲ್ಲಿ ನಡೆದ 4ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ತಂಡ ಪ್ರವಾಸಿ ಭಾರತ ತಂಡದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ರಾಸ್ ಟೇಲರ್ ಅವರ ಅಮೋಘ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಭಾರತ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕಿವೀಸ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಾಯಕ ಮಹೇಂದ್ರಸಿಂಗ್ ಧೋನಿ (79 ರನ್, ಅಜೇಯ), ರೋಹಿತ್ ಶರ್ಮಾ(79) ಮತ್ತು ರವೀಂದ್ರ ಜಡೇಜಾ(62 ರನ್, ಅಜೇಯ) ಅವರ ಸಮಯೋಚಿತ ಆಟದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 278ರನ್ ಗಳಿಸಿತ್ತು.
ಈ ಸವಾಲಿನ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಂಡ್ ತಂಡ ಆರಂಭಿಕ ಆಘಾತದ ನಡುವೆಯೂ ಟೇಲರ್(112 ರನ್, ಅಜೇಯ) ಮತ್ತು ವಿಲಿಯಮ್ಸನ್(60ರನ್) ಅವರ ಆಟದ ನೆರವಿನಿಂದ ಭಾರತ ವಿರುದ್ಧ 7 ವಿಕೆಟ್ ಗಳ ಗೆಲುವು ಸಾಧಿಸಿದೆ. ಆ ಮೂಲಕ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಆರಂಭಿಕ ಆಘಾತದ ಒತ್ತಡದ ನಡುವೆಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಸ್ ಟೇಲರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.