ಸಲಿಂಗಕಾಮ: ತೀರ್ಪು ಮರುಪರಿಶೀಲನೆಗೆ "ಸುಪ್ರೀಂ" ನಕಾರ
"ಸಲಿಂಗಕಾಮ ಅಪರಾಧ" ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಸಲಿಂಗಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನವದೆಹಲಿ: ಸಲಿಂಗಕಾಮದ ಬಗ್ಗೆ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಸಲಿಂಗಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಕಳೆದ ಡಿಸೆಂಬರ್ನಲ್ಲಿ ಸಲಿಂಗ ಕಾಮ ಅಪರಾಧ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತರ ಸಂಘಟನೆ ಮತ್ತು ಸಲಿಂಗಕಾಮಿ ಕಾರ್ಯಕರ್ತರು ಮೇಲ್ಮನವಿ ಸಲ್ಲಿಸಿದ್ದರು.
ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಹೆಚ್.ಎಲ್.ದತ್ತು ಮತ್ತು ಎಸ್.ಜೆ.ಮುಖೋಪಧ್ಯಾಯ ಅವರು ತೀರ್ಪು ಮರು ಪರಿಶೀಲನೆ ಮಾಡಲು ನಿರಾಕರಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಮಾನವನ್ನು ವಿರೋಧಿಸಿರುವ ಸಲಿಂಗ ಅಲ್ಪಸಂಖ್ಯಾತರ ಸಂಘ 'ನಾಝ್' ಸಂಸ್ಥೆ, ನ್ಯಾಯಾಲಯದ ನಡೆಯಿಂದಾಗಿ ಸಲಿಂಗಿ ಅಲ್ಪ ಸಂಖ್ಯಾತರು ಕಾನೂನು ಕ್ರಮ ಎದುರಿಸುವ ಭೀತಿಗೆ ಒಳಗಾಗಿದ್ದಾರೆ ಎಂದು ಹೇಳಿದೆ.
'ಕಳೆದ ನಾಲ್ಕು ವರ್ಷಗಳ ಹಿಂದೆ ದೆಹಲಿ ಹೈಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಅಂದಿನಿಂದ ದೇಶದಲ್ಲಿರುವ ಲಕ್ಷಾಂತರ ಸಲಿಂಗಿ ಅಲ್ಪ ಸಂಖ್ಯಾತರು ತಾವು ಸಲಿಂಗಿಗಳೆಂದು ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಅವರು ಕಾನೂನು ಕ್ರಮ ಎದುರಿಸುವ ಭೀತಿಗೆ ಒಳಗಾಗಿದ್ದಾರೆ' ಎಂದು ನಾಝ್ ಸಂಸ್ಥೆ ಅಭಿಪ್ರಾಯಪಟ್ಟಿದೆ.