ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಅಗತ್ಯವಿಲ್ಲ: ಪೂಜಾರಿ
ಭಕ್ತರಿಗೆ ನೋವುಂಟು ಮಾಡುವಂತಹ ಕಾಯ್ದೆ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಮಂಗಳವಾರ ಹೇಳಿದ್ದಾರೆ.
ಉಡುಪಿ: ಭಕ್ತರಿಗೆ ನೋವುಂಟು ಮಾಡುವಂತಹ ಕಾಯ್ದೆ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಮಂಗಳವಾರ ಹೇಳಿದ್ದಾರೆ.
ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯ ಕುರಿತು ಉಡುಪಿಯಲ್ಲಿ ಮಾತನಾಡಿದ ಜನಾರ್ಧನ ಪೂಜಾರಿ, ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಅಗತ್ಯವಿಲ್ಲ. ರಾಜ್ಯ ಸರ್ಕಾರ ಕೋಟ್ಯಾಂತರ ಭಕ್ತರಿಗೆ ದುಃಖ ಉಂಟು ಮಾಡುವಂತಹ ಕೆಲಸ ಮಾಡಬಾರದು. ಸರ್ಕಾರ ಮಠಗಳ ವಿಚಾರಕ್ಕೆ ಕೈ ಹಾಕಬಾರದು. ಕಾಂಗ್ರೆಸ್ ಹೈಕಮಾಂಡ್ ಕೂಡ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಜರಾಯಿ ಇಲಾಖೆ ಸಚಿವ ಪ್ರಕಾಶ್ ಹುಕ್ಕೇರಿ ಅವರನ್ನು ಕರೆದು ಚರ್ಚಿಸಿ ಕಾಯ್ದೆ ಅನುಷ್ಠಾನವನ್ನು ಕೈ ಬಿಡಬೇಕು ಎಂದು ಹೇಳಿದರು.
ಟಿಕೆಟ್ ಸಿಗದ್ದಿದ್ದರೆ ನನ್ನ ವ್ಯಕ್ತಿತ್ವ ಹಾಳಾಗದು
ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರ ಕುರಿತು ಮಾತನಾಡಿದ ಜನಾರ್ಧನ ಪೂಜಾರಿ ಅವರು, ನನಗೆ ಟಿಕೆಟ್ ನೀಡಿ ಎಂದು ಎಐಸಿಸಿಗೆ ಅರ್ಜಿ ಹಾಕಿಲ್ಲ. ಟಿಕೆಟ್ ಸಿಗದಿದ್ದರೆ ನನ್ನ ವ್ಯಕ್ತಿತ್ವವೇನೂ ಹಾಳಾಗುವುದಿಲ್ಲ. ಆದರೆ ಟಿಕೆಟ್ ನೀಡುವ ಮುನ್ನ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲಿ ಎಂದು ಅವರು ಹೇಳಿದರು.