ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಟೋಲ್' ರಾಜಕೀಯ: ರಾಜ್ ಠಾಕ್ರೆ ವಿರುದ್ಧ ಉದ್ಧವ್ ಕಿಡಿ

ಮಹಾರಾಷ್ಟ್ರದ ಟೋಲ್ ಬೂತ್ ಗಳಲ್ಲಿನ ಹಣ ಸಂಗ್ರಹದ ವಿರುದ್ಧ ಎಂಎನ್ಎಸ್ ನಡೆಸುತ್ತಿರುವ ಪ್ರತಿಭಟನೆ ಕುರಿತು ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.

Srinivasa Murthy VN
Updated On : 29 Jan 2014, 3:58 am

ಮುಂಬೈ: ಮಹಾರಾಷ್ಟ್ರದ ಟೋಲ್ ಬೂತ್ ಗಳಲ್ಲಿನ ಹಣ ಸಂಗ್ರಹದ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ನಡೆಸುತ್ತಿರುವ ಪ್ರತಿಭಟನೆ ಕುರಿತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.

ಶಿವಸೇನಾ ಮುಖವಾಣಿ 'ಸಾಮ್ನಾ'ದಲ್ಲಿ ಈ ಬಗ್ಗೆ ಬರೆದಿರುವ ಉದ್ಧವ್ ಠಾಕ್ರೆ, 'ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ನಡೆಸುತ್ತಿರುವ ಪ್ರತಿಭಟನೆ ಕೇವಲ ಚುನಾವಣಾ ಗಿಮಿಕ್. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ ಠಾಕ್ರೆ ಜನರ ಕಣ್ಣೊರೆಸುವ ನಾಟಕವಾಡುತ್ತಿದ್ದು, ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಲು ಅವರು ಈ ದಾರಿ ಹಿಡಿದಿದ್ದಾರೆ'.

ಅಲ್ಲದೆ 'ಸರ್ಕಾರದ ಈ ಜನವಿರೋಧಿ ಟೋಲ್ ಸಂಗ್ರಹದ ವಿರುದ್ಧ ಮೊದಲು ಧನಿ ಎತ್ತಿದ್ದು ಶಿವಸೇನೆ. ಎಂಎನ್ಎಸ್ ಶಿವಸೇನೆಯನ್ನು ಹಿಂಬಾಲಿಸುತ್ತಿದೆಯೇ ಹೊರತು. ಅದು ಪ್ರಾಮಾಣಿಕವಾಗಿ ಪ್ರತಿಭಟನೆಯಲ್ಲಿ ತೊಡಗಿಲ್ಲ' ಎಂದು ಉದ್ಧವ್ ಹೇಳಿದ್ದಾರೆ.

ಮುಂಬೈನ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಲಿಂಕ್ ರಸ್ತೆಗಳಲ್ಲಿ ಮಹಾರಾಷ್ಟ್ರ ಸರ್ಕಾರ ಟೋಲ್ ಸಂಗ್ರಹ ಮಾಡುವುದನ್ನು ವಿರೋಧಿಸಿ ಕಳೆದ ಶನಿವಾರದಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಪ್ರತಿಭಟನಾಕಾರರು ಹಲವು ಟೋಲ್ ಬೂತ್ ಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಈ ಕೂಡಲೇ ಸರ್ಕಾರ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹೀಗಾಗಿ ಟೋಲ್ ಬೂತ್ ಗಳಲ್ಲಿ ಮಹಾರಾಷ್ಟ್ರ ಸರ್ಕಾರ ಹೆಚ್ಚುವರಿ ಭದ್ರತೆ ನಿಯೋಜಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದ, ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟೋಲ್ ಕೇಳಿದರೆ ದಾಳಿ ಮಾಡಿ: ರಾಜ್ ಠಾಕ್ರೆ
'ಟೋಲ್ ಬೂತ್ ಗಳಲ್ಲಿ ಸಿಬ್ಬಂದಿಗಳು ಹಣ ಕೇಳಿದರೆ ದಾಳಿ ನಡೆಸಿ' ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಕಾರ್ಯಕರ್ತರಿಗೆ ಕಳೆದ ಭಾನುವಾರ ಕರೆ ನೀಡಿದ್ದರು. ಹೀಗಾಗಿ ಟೋಲ್ ಸಂಗ್ರಹ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಹಲವು ಟೋಲ್ ಬೂತ್ ಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಟೋಲ್ ಸಿಬ್ಬಂದಿಗಳನ್ನು ಥಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement