ರಣಜಿ ಫೈನಲ್: ಮೊದಲ ದಿನದಾಟದಂತ್ಯಕ್ಕೆ ಮಹಾರಾಷ್ಟ್ರ 272/5
ಹೈದರಾಬಾದ್ ನಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದ ಮೊದಲ ದಿನದಾಟ ಅಂತ್ಯಕ್ಕೆ ಮಹಾರಾಷ್ಟ್ರ 5 ವಿಕೆಟ್‌ನಷ್ಟಕ್ಕೆ 275 ರನ್ ಗಳಿಸಿದೆ.
ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ತನ್ನ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು 265 ರನ್ ಗಳಿಸಿದೆ.
ಇಂದು ಬೆಳಗ್ಗೆ ಆರಂಭವಾದ ರಣಜಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮಹಾರಾಷ್ಟ್ರ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ಆ ಮೂಲಕ ಕರ್ನಾಟಕದ ಬೌಲರ್ ಗಳ ಮೇಲೆ ಸವಾರಿ ಮಾಡಲು ಉತ್ಸುಕವಾಗಿತ್ತು. ಆದರೆ ನಾಯಕ ವಿನಯ್ ಕುಮಾರ್ ನೇತೃತ್ವದ ಕರ್ನಾಟಕದ ಪ್ರಭಾವಿ ಬೌಲಿಂಗ್ ನಿಂದಾಗಿ ಮಹಾರಾಷ್ಟ್ರ ತಂಡ ಕೇವಲ 24 ರನ್ ಗಳಿಸುವಷ್ಟರಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಹರ್ಷದ್ ಖಡೀವಾಲೆ ಅವರು 15 ರನ್ ಗಳಿಸಿ ವಿನಯ್ ಕುಮಾರ್ ಅವರ ಎಲ್ ಬಿ ಬಲೆಗೆ ಬಿದ್ದರು.
ಅನಂತರ ಕ್ರೀಸ್‌ಗೆ ಆಗಮಿಸಿದ ವಿಜಯ್ ಜೋಲ್ ಅವರು ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ಶ್ರೀನಾಥ್ ಅರವಿಂದ್ ಅವರಿಗೆ ವಿಕೆಟ್ ಒಪ್ಪಿಸಿದರು. ಅನಂತರ ಆಗಮಿಸಿದ ಜಾಧವ್ ವೇಗದ 37 ರನ್‌ಗಳಿಸಿ ಮಿಥುನ್ ಗೆ ವಿಕೆಟ್ ಒಪ್ಪಿಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ತಾಳ್ಮೆಯ ಆಟವಾಡುತ್ತಿದ್ದ ಚಿರಾಗ್ ಖುರಾನಾ ಅವರು, ಅರ್ಧಶತಕ ದಾಖಲಿಸಿ ಸಂಭ್ರಮಿಸಿದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಕರುಣ್ ನಾಯರ್ ಅವರು ಚಿರಾಗ್ ಖುರಾನಾ ಅವರನ್ನು ಎಲ್‌ಬಿ ಬಲೆಗೆ ಕೆಡವುವಲ್ಲಿ ಯಶಸ್ವಿಯಾದರು. ಖುರಾನಾ ಔಟ್ ಆದಾಗ ಮಹಾರಾಷ್ಟ್ರದ ಮೊತ್ತ ನಾಲ್ಕು ವಿಕೆಟ್ ನಷ್ಟಕ್ಕೆ 144 ರನ್‌ಗಳಾಗಿತ್ತು.
ಖುರಾನಾ ನಂತರ ಬಂದ ಮಹಾರಾಷ್ಟ್ರ ತಂಡದ ನಾಯಕ ರೋಹಿತ್ ಮೋಟ್ವಾನಿ ಅವರು ಕೇವಲ 17 ರನ್‌ಗಳನ್ನಷ್ಟೇ ಗಳಿಸಿ ಮಿಥುನ್ ಗೆ ವಿಕೆಟ್ ಒಪ್ಪಿಸಿದರು. ಪ್ರಸ್ತುತ ಕ್ರೀಸ್‌ನಲ್ಲಿರುವ ಅಂಕಿತ್ ಬಾವ್ನೆ ಮಹಾರಾಷ್ಟ್ರ ತಂಡಕ್ಕೆ ಆಸರೆಯಾಗಿದ್ದು, 84 ರನ್ ಗಳಿಸಿ ಆಟವಾಡುತ್ತಿದ್ದಾರೆ. ಅವರಿಗೆ ಸಂಗ್ರಾಮ್ ಅತಿತ್‌ಕರ್(26 ರನ್) ಅವರು ಉತ್ತಮ ಸಾಥ್ ನೀಡುತ್ತಿದ್ದಾರೆ.
ಕರ್ನಾಟಕದ ಪರ ನಾಯಕ ಆರ್.ವಿನಯ್ ಕುಮಾರ್ ಅವರು 1 ವಿಕೆಟ್ ಕಬಳಿಸಿದ್ದು, ಉಳಿದಂತೆ ಅಭಿಮನ್ಯು ಮಿಥುನ್ 2 ವಿಕೆಟ್, ಎಸ್ ಅರವಿಂದ್ ಮತ್ತು ಕೆ ನಾಯರ್ ಅವರು ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.