ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸ್ಟಾಲಿನ್‌ಗೆ ಜೀವ ಬೆದರಿಕೆ: ಪ್ರಧಾನಿ ಮೊರೆ ಹೋದ ಕರುಣಾನಿಧಿ

ಸ್ಟಾಲಿನ್ ಅವರಿಗೆ ಹೆಚ್ಚುವರಿ ಭದ್ರತೆ ನೀಡುವಂತೆ ಕೋರಿ ತ.ನಾಡು ಮಾಜಿ ಸಿಎಂ ಎಂ.ಕರುಣಾನಿಧಿ ಅವರು ಪ್ರಧಾನಿ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

Srinivasa Murthy VN
Updated On : 29 Jan 2014, 2:20 am

ಚೆನ್ನೈ: ತಮ್ಮ ಪುತ್ರ ಎಂ.ಕೆ. ಸ್ಟಾಲಿನ್ ಅವರಿಗೆ ಹೆಚ್ಚುವರಿ ಭದ್ರತೆ ನೀಡುವಂತೆ ಕೋರಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಇಂದು ಬೆಳಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಕರುಣಾನಿಧಿ ಅವರು, ತಮ್ಮ ಕಿರಿಯ ಪುತ್ರ ಎಂ.ಕೆ.ಸ್ಟಾಲಿನ್‌ಗೆ ಜೀವಬೆದರಿಕೆ ಇದ್ದು, ಈಗಿರುವ ಭದ್ರತೆಯೊಂದಿಗೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ಅಳಗಿರಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ: ಸ್ಟಾಲಿನ್
ಈ ಬಗ್ಗೆ ಮಾತನಾಡಿದ ಕರುಣಾನಿಧಿ ಅವರ ಕಿರಿಯ ಪುತ್ರ ಎಂ.ಕೆ.ಸ್ಟಾಲಿನ್ ಅವರು, ತಾವು ತಮ್ಮ ಸಹೋದರ ಅಳಗಿರಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಹೀಗಾಗಿ ಪಕ್ಷದ ಕಾರ್ಯಕರ್ತರು ಮತ್ತು ತಮ್ಮ ಬೆಂಬಲಿಗರು ಅಳಗಿರಿ ಅವರ ವಿರುದ್ಧದ ಪ್ರತಿಭಟನೆಯನ್ನು ಕೈ ಬಿಟ್ಟು, ಅವರ ಪ್ರತಿಕೃತಿ ದಹಿಸವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯತ್ತ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಈ ಹಿಂದೆ ಡಿಎಂಕೆ ಮತ್ತು ನಟ ವಿಜಯ್ ಕಾಂತ್ ಅವರ ನೇತೃತ್ವದ ಡಿಎಂಡಿಕೆ ಪಕ್ಷದೊಂದಿಗಿನ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದಾಗಿ ಕರುಣಾನಿಧಿ ಪುತ್ರ ಅಳಗಿರಿ, ತಮ್ಮ ಸಹೋದರ ಸ್ಟಾಲಿನ್ ಅವರಿಗೆ ಜೀವಬೆದರಿಕೆ ಹಾಕಿರುವುದನ್ನು ಸ್ವತಃ ಅವರ ತಂದೆ ಕರುಣಾನಿಧಿ ಅವರೇ ನಿನ್ನೆ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದರು.

ಅಳಗಿರಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕರುಣಾನಿಧಿ ಅವರು, 'ಜನವರಿ 24ರಂದು ಮನೆಗೆ ಬಂದಿದ್ದ ಅಳಗಿರಿ, ಸ್ಟಾಲಿನ್ ಕುರಿತು ತೀವ್ರವಾದ ಸಿಟ್ಟಿನಿಂದ ಆಕ್ರೋಶದಿಂದ ಬೇಕಾಬಿಟ್ಟಿ ಬಾಯಿಗೆ ಬಂದಂತೆ ಮಾತಾನಾಡಿದ್ದ. ಅಲ್ಲದೆ ಇನ್ನು 3 ತಿಂಗಳಲ್ಲಿ ಸ್ಟಾಲಿನ್‌ರನ್ನು ಮುಗಿಸುವುದಾಗಿ ಹೇಳಿದ. ಅಳಿಗಿರಿ ಹೇಳಿಕೆಯಿಂದ ನಾನು ಕಕ್ಕಾಬಿಕ್ಕಿಯಾದೆ. ಪರಸ್ಪರ ಸೌಹಾರ್ದದಿಂದ ಬದುಕಲು ಕೇಳಿಕೊಂಡೆ. ಆದರೆ ಅಳಗಿರಿ ಕೇಳಲಿಲ್ಲ. ಅದೇ ಕಾರಣಕ್ಕೆ ಪಕ್ಷದಿಂದ ಹೊರಹಾಕುವ ನಿರ್ಧಾರ ಮಾಡಲಾಯಿತು' ಎಂದು ಹೇಳಿದ್ದರು.

ಸ್ಟಾಲಿನ್ ಬೆಂಬಲಿಗರ ಪ್ರತಿಭಟನೆ
ಕರುಣಾನಿಧಿ ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಸ್ಟಾಲಿನ್ ಬೆಂಬಲಿಗರು ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಿದರು. ಅಲ್ಲದೆ ಅಳಗಿರಿ ಪ್ರತಿಕೃತಿ ಧಹಿಸಿ, ಅವರನ್ನು ಕೂಡ ಕೊಲ್ಲತ್ತೇವೆ. ಇದಕ್ಕಾಗಿ ಆತ್ಮಹತ್ಯಾದಳದ ರಚನೆಗೂ ತಾವು ಸಿದ್ದ ಎಂದು ಹೇಳಿದ್ದರು.

ನಾನು ಬೆದರಿಕೆ ಹಾಕಿಯೇ ಇಲ್ಲ: ಅಳಗಿರಿ ಅಳಲು
ತಮ್ಮ ವಿರುದ್ಧ ಸ್ಟಾಲಿನ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಮದುರೈ ನಿವಾಸದಲ್ಲಿದ್ದ ಅಳಗಿರಿ ಅವರು ಅಲ್ಲಿಂದಲೇ ಸುದ್ದಿಗೋಷ್ಠಿ ನಡೆಸಿ, ತಾವು ಆ ರೀತಿ ಹೇಳಿಯೇ ಇಲ್ಲ. ಬಹುಶಃ ಇದು ನನ್ನ ಜನ್ಮದಿನದ ಉಡುಗೊರೆ ಇರಬೇಕು. ತಂದೆಯವರಿಂದ ಇಂತಹ ಉಡಗೊರೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಮ್ಮ ತಂದೆಯವರಿಗೆ ಯಾರೋ ಕಿವಿ ತುಂಬುತ್ತಿದ್ದಾರೆ. ಊಹಾಪೋಹಗಳಿಗೆ ಜನತೆ ಕಿವಿಗೊಡಬಾರದು ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement