ಬಂಡೆ ಸಾವು ತನಿಖೆಗೆ ಬ್ಯಾಲಿಸ್ಟಿಕ್ ತಜ್ಞರ ನೇಮಕ: ಕೆ.ಜೆ.ಜಾರ್ಜ್
ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಕುರಿತು ತನಿಖೆ ನಡೆಸಲು ಬ್ಯಾಲಿಸ್ಟಿಕ್ ತಜ್ಞರನ್ನು ನೇಮಿಸಲಾಗುವುದು..
ಬೆಂಗಳೂರು: ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಕುರಿತು ತನಿಖೆ ನಡೆಸಲು ಬ್ಯಾಲಿಸ್ಟಿಕ್ ತಜ್ಞರನ್ನು ನೇಮಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಸಾವಿನ ಕುರಿತು ಸಿಐಡಿ ತಯಾರಿಸಿರುವ ವರದಿಯ ವಿವರವನ್ನು ವಿಧಾನಸಭೆಗೆ ವಿವರಿಸಿದ ಗೃಹ ಸಚಿವ ಜಾರ್ಜ್ ಅವರು, ನಂತರ ತನಿಖಾ ಯೋಜನೆಯನ್ನು ವಿವರಿಸಿದರು. 'ಬಂಡೆ ಸಾವಿನ ಪ್ರಕರಣವನ್ನು 3 ಹಂತಗಳಲ್ಲಿ 3 ವಿಭಾಗಗಳಾಗಿ ತನಿಖೆ ನಡೆಸಲಾಗುವುದು. ಇದಕ್ಕಾಗಿ ವಿಧಿ ವಿಜ್ಞಾನ ತಜ್ಞರನ್ನು ಬಳಸಿಕೊಳ್ಳಲಾಗುವುದು. ವಿಶೇಷವಾಗಿ ಬ್ಯಾಲಿಸ್ಟಿಕ್ ತಜ್ಞರನ್ನು ಬಳಸಿಕೊಂಡು ಪ್ರಕರಣದ ಎಲ್ಲ ಘಟನೆಗಳ ಸಮಗ್ರ ತನಿಖೆ ನಡೆಸಲಾಗುತ್ತದೆ' ಎಂದು ಅವರು ತಿಳಿಸಿದರು.
'ಸಿಐಡಿ ವರದಿಯನ್ವಯ ತನಿಖಾಧಿಕಾರಿಗಳಿಗೆ ವೈಜ್ಞಾನಿಕ, ತಾಂತ್ರಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಸಲಹೆ ನೀಡಿದ್ದು, ಘಟನೆಯ ಪ್ರತಿಯೊಂದು ಸೂಕ್ಷ್ಮ ಅಂಶಗಳನ್ನು ದಾಖಲಿಸುವಂತೆ ಸೂಚಿಸಲಾಗಿದೆ. ರೌಡಿ ಮುನ್ನ ಬಂಧನಕ್ಕಾಗಿ ತಂಡ ಹೊರಡುವ ಮುನ್ನ ನಡೆದ ಘಟನೆಗಳಿಂದ ಹಿಡಿದು ಮುನ್ನಾ ಮನೆಯಲ್ಲಿ ನಡೆದ ಪ್ರತಿಯೊಂದು ಘಟನೆ ವಿವರ ಮತ್ತು ಘಟನೆ ಸಂದರ್ಭದಲ್ಲಿ ಬಂಡೆ ಅವರಿಗೆ ಎಷ್ಟು ಅಡಿಯಿಂದ ಗುಂಡು ಹಾರಿದೆ. ಗುಂಡು ಹಾರಿರುವ ಅಂತರ ಮತ್ತು ಆ ಸಂದರ್ಭದಲ್ಲಿ ಬಂಡೆ ಅವರಿದ್ದ ಅಂತರದಂತಹ ಸೂಕ್ಷ್ಮ ಅಂಶಗಳನ್ನು ದಾಖಲಿಸುವಂತೆ ಸಲಹೆ ನೀಡಲಾಗಿದೆ' ಎಂದು ಜಾರ್ಜ್ ಹೇಳಿದರು.
ಒಟ್ಟಾರೆ ಇಡೀ ರಾಜ್ಯದ ಗಮನ ಸೆಳೆದಿರುವ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಸಾವು ಪ್ರಕರಣ ಇದೀಗ ಹೊಸ ದಿಕ್ಕಿನತ್ತ ಸಾಗಿದೆ.