ಉ.ಖಂಡ ಸಿಎಂ ವಿಜಯ್ ಬಹುಗುಣ ರಾಜಿನಾಮೆ
ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಆಂತರಿಕ ಒತ್ತಡ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ತಮ್ಮ ಸ್ಥಾನಕ್ಕೆ ವಿಜಯ್ ಬಹುಗುಣ ಅವರು ರಾಜಿನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಉತ್ತರಾಖಂಡ ರಾಜ್ಯಪಾಲರನ್ನು ಭೇಟಿ ಮಾಡಿದ್ದ ವಿಜಯ್ ಬಹುಗುಣ ಅವರು ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಇದೀಗ ರಾಜಿನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಕೇಂದ್ರ ಸಚಿವ ಹರೀಶ್ ರಾವತ್ ಅವರು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ನಡೆದ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ವಿಜಯ್ ಬಹುಗುಣ ಅವರ ನೇತೃತ್ವದ ಸರ್ಕಾರ ನಡೆದುಕೊಂಡ ರೀತಿ ದೇಶಾದ್ಯಂತ ಟೀಕೆಗೆ ಒಳಗಾಗಿತ್ತು. ಅಲ್ಲದೆ ಪ್ರವಾಹದ ನಂತರದಲ್ಲಿ ಸರ್ಕಾರ ಕೈಗೊಂಡಿದ್ದ ಪುನರ್ವಸತಿ ಕಾರ್ಯ ಕೂಡ ಕಳಪೆಯಾಗಿತ್ತು ಎಂದು ಪ್ರವಾಹ ನಿರ್ಗತಿಕರು ಆರೋಪಿಸಿದ್ದರು. ಹೀಗಾಗಿಯೇ ಕಾಂಗ್ರೆಸ್ ಹೈಕಮಾಂಡ್ ವಿಜಯ್ ಬಹುಗುಣ ಒತ್ತಾಯ ಪೂರ್ವಕವಾಗಿ ರಾಜಿನಾಮೆ ನೀಡುವಂತೆ ಮಾಡಿದೆ ಎನ್ನಲಾಗುತ್ತಿದೆ.
2013 ರ ಜೂನ್ ತಿಂಗಳಿನಲ್ಲಿ ಧಾರ್ಮಿಕ ಕ್ಷೇತ್ರಗಳಾದ ಕೇದಾರನಾಥ ಮತ್ತು ಬದ್ರಿನಾಥ ಕ್ಷೇತ್ರಗಳಲ್ಲಿ ಉಂಟಾದ ಪ್ರವಾಹದಿಂದಾಗಿ ಸುಮಾರು ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದರು.