ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಿತ್ರರಂಗದಿಂದ ಕೀರವಾಣಿ ನಿವೃತ್ತಿ!

ತೆಲುಗು ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ನಿವೃತ್ತಿಯಾಗುತ್ತಿದ್ದಾರೆ.

Srinivasa Murthy VN
Updated On : 31 Jan 2014, 2:44 am

ಹೈದರಾಬಾದ್: ತೆಲುಗು ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ನಿವೃತ್ತಿಯಾಗುತ್ತಿದ್ದಾರೆ.

ಸತತ 3 ದಶಕಗಳಿಂದ ತೆಲುಗು, ಕನ್ನಡ ಮತ್ತು ತಮಿಳು ಚಿತ್ರರಸಿಕರನ್ನು ರಂಜಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ತಮ್ಮ ವೃತ್ತಿ ಜೀವನದಿಂದ ನಿವೃತ್ತಿಯಾಗಲು ಬಯಸಿದ್ದಾರೆ. ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಸ್ವತಃ ಅವರೇ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದು, 2016ರ ಡಿಸೆಂಬರ್ 8ರಂದು ಅವರು ನಿವೃತ್ತಿಯಾಗಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, 'ನಾನು ನನ್ನ ಮೊದಲ ಹಾಡನ್ನು 1989ರ ಡಿಸೆಂಬರ್ 9ರಂದು ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿದ್ದೆ. ಅಂದೇ ನಾನು ನನ್ನ ನಿವೃತ್ತಿ ದಿನಾಂಕವನ್ನು ನಿರ್ಧರಿಸಿದ್ದೆ. ನನ್ನ ವೃತ್ತಿ ಜೀವನದ ಮೊದಲ ದಿನವೇ ನಾನು 2016ರ ಡಿಸೆಂಬರ್ 8ರಂದು ನಿವೃತ್ತಿಯಾಗಬೇಕು ಎಂದು ತೀರ್ಮಾನಿಸಿದ್ದೆ. ಇಂದು ಅದರ ಅಧಿಕೃತ ಪ್ರಕಟಣೆಯನ್ನು ಮಾತ್ರ ಹೊರಹಾಕುತ್ತಿದ್ದೇನೆ. ನನ್ನ ನಿವೃತ್ತಿಯನ್ನು ನಾನು ನನ್ನ ಚಿತ್ರರಂಗದ ಸ್ನೇಹಿತರೊಂದಿಗೆ ಸೇರಿ ಆಚರಿಸಲು ಬಯಸಿದ್ದೇನೆ. ಇದಕ್ಕಾಗಿ ನಾನು ಕೆಲ ಯೊಜನೆಗಳನ್ನು ಹಾಕಿಕೊಂಡಿದ್ದೇನೆ. 2016 ಅಂದರೆ ಇನ್ನು 3 ವರ್ಷಗಳ ನಂತರ ನಾನು ನಿವೃತ್ತಿ ಹೊಂದುತ್ತೇನೆ'.

'ನನ್ನ ಕೊನೆಯ ಹಾಡು ಬಹುಶಃ ಹೈದರಾಬಾದಿನಲ್ಲಿರುವ ಪ್ರಸಾದ್ ಸ್ಟುಡಿಯೋದಲ್ಲಿ ರೆಕಾರ್ಡ್ ಆಗಬಹುದು. ಈ ಮೂರು ವರ್ಷಗಳ ಅಂತರದಲ್ಲಿ ನನ್ನ ಎಲ್ಲ ಸ್ನೇಹಿತರು, ಅಭಿಮಾನಿಗಳು ಮತ್ತು ಹಿತೈಷಿಗಳು ನನ್ನ ವೃತ್ತಿ ಜೀವನದ ಕುರಿತು ತಮ್ಮ ಅಭಿಪ್ರಾಯ, ಸಲಹೆ, ಸೂಚನೆ, ಇಷ್ಟವಾದದ್ದು, ಇಷ್ಟವಾಗದ್ದು ಮತ್ತು ಶುಭಾಷಯಗಳನ್ನು ಹಂಚಿಕೊಳ್ಳಬಹುದು' ಎಂದು ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು.

1987ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೀರವಾಣಿ ಅವರು ಆರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ 'ಚಕ್ರವರ್ತಿ'ಯವರ ಬಳಿ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅನಂತರ 1990ರಲ್ಲಿ ಸ್ವತಂತ್ರವಾಗಿ 'ಕಲ್ಕಿ' ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದರಾದರೂ ಕಾರಣಾಂತರಗಳಿಂದ ಆಚಿತ್ರ ಬಿಡುಗಡೆಯಾಗಲೇ ಇಲ್ಲ. ಅದೇ ವರ್ಷ ನಿದೇರ್ಶಕ ಮೌಳಿ ಅವರ 'ಮನಸು ಮಮತ' ಎಂಬ ಚಿತ್ರಕ್ಕೆ ಸಂಗೀತ ನೀಡಿದ್ದ ಕೀರವಾಣಿ ತಮ್ಮ ಅಧಿಕೃತ ಮೊದಲ ಚಿತ್ರದಲ್ಲಿ ಉಧ್ಯಮದ ಗಣ್ಯರ ಗಮನ ಸೆಳೆದಿದ್ದರು. ಅಂದಿನಿಂದ ಇಂದಿನವರೆಗೂ ಕೀರವಾಣಿ ಅವರು ಸುಮಾರು 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ತೆಲುಗಿನ ಸೂಪರ್ ಹಿಟ್ ಚಿತ್ರ ಮಗಧೀರ, ಮೆಗಾಸ್ಟಾರ್ ಚಿರಂಜೀವಿ ಅವರ ಬ್ಲಾಕ್ ಬಸ್ಟರ್ ಚಿತ್ರ ಘರಾನಾ ಮೊಗುಡು ಚಿತ್ರಗಳು ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಿಗೆ ಕೀರವಾಣಿ ಸಂಗೀತ ನಿರ್ದೇಶನ ನೀಡಿದ್ದಾರೆ. ತೆಲುಗಿನ ಬ್ಲಾಕ್ ಬಸ್ಟರ್ ಡೈರೆಕ್ಟರ್ ಎಂದೇ ಖ್ಯಾತಿ ಗಳಿಸಿರುವ ಎಸ್.ಎಸ್.ರಾಜಮೌಳಿ ಅವರ ಶಾಶ್ವತ ಸಂಗೀತ ನಿರ್ದೇಶಕರು ಕೂಡ ಇದೇ ಕೀರವಾಣಿ ಅವರು. ಕನ್ನಡಲ್ಲಿಯೂ ಹಲವು ಚಿತ್ರಗಳಿಗೆ ಕೀರವಾಣಿ ಅವರು ಸಂಗೀತ ನೀಡಿದಷ್ಟೇ ಅಲ್ಲದೆ ಹಾಡುಗಳನ್ನು ಕೂಡ ಹಾಡಿದ್ದಾರೆ. ಸುಂದರಕಾಂಡ, ಅಪ್ಪಾಜಿ, ಸ್ವಾತಿ, ಭೈರವ, ಸಾಮ್ರಾಟ್, ಜಮೀನ್ದಾರ್ರು, ದೀಪಾವಳಿಯಂತಹ ಸೂಪರ್ ಹಿಟ್ ಚಿತ್ರಗಳಿಗೆ ಕೀರವಾಣಿ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement