ರಣಜಿ ಫೈನಲ್: ಕರ್ನಾಟಕದ ಮೇಲುಗೈ, ಮಹಾರಾಷ್ಟ್ರದ ದಿಟ್ಟ ಉತ್ತರ
ರಣಜಿ ಕ್ರಿಕೆಟ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 137ರನ್‌ಗಳ ಮುನ್ನಡೆ ಸಾಧಿಸಿದೆ.
ಹೈದರಾಬಾದ್: ರಣಜಿ ಕ್ರಿಕೆಟ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 137ರನ್‌ಗಳ ಮುನ್ನಡೆ ಸಾಧಿಸಿದೆ.
ರಣಜಿ ಫೈನಲ್ ಪಂದ್ಯದ 3ನೇ ದಿನವಾದ ಇಂದು ಬ್ಯಾಟಿಂಗ್ ಮುಂದುವರೆಸಿರುವ ಕರ್ನಾಟಕ ತಂಡದ ಆಟಗಾರರು, ಮಹಾರಾಷ್ಟ್ರ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದಾರೆ. ನಿನ್ನೆ ವಿಕೆಟ್ ನಷ್ಟ ವಿಲ್ಲದೆ 230ರನ್ ಗಳಿಸಿದ್ದ ಕರ್ನಾಟಕ ಇಂದು ಚಹಾ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 443ರನ್ ಗಳನ್ನು ಕಲೆಹಾಕಿದೆ. ನಿನ್ನೆ ಶತಕ ಭಾರಿಸಿದ್ದ ಗಣೇಶ್ ಸತೀಶ್ ಅವರು 117ರನ್ ಗಳಿಸಿ ಖುರಾನ ಅವರಿಗೆ ಕ್ಲೀನ್ ಬೋಲ್ಡ್ ಆದರು. ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದ ರಾಹುಲ್ ಅವರು 131ರನ್ ಗಳಿಸಿ ಔಟ್ ಆದರು.
ನಿನ್ನೆ ಗಾಯಗೊಂಡು ಪೆವಿಲಿಯನ್ ಮರಳಿದ್ದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರು ಚೇತರಿಸಿಕೊಂಡು ಇಂದು ಬ್ಯಾಟಿಂಗ್ ನಡೆಸಿ ಅಮೂಲ್ಯ 72 ರನ್‌ಗಳ ಕಾಣಿಕೆ ನೀಡಿದರು. 72 ರನ್‌ಗಳಿಸಿದ್ದ ಉತ್ತಪ್ಪ ಅವರು ಮುಂಡೆ ಬೌಲಿಂಗ್ ನಲ್ಲಿ ಔಟ್ ಆದರು. ನಂತರ ಮನೀಶ್ ಪಾಂಡೆ ಅವರು 36 ರನ್‌ಗಳಿಸಿ ಫಲ್ಹಾ ಅವರ ಬೌಲಿಂಗ್‌ನಲ್ಲಿ ಎಲ್‌ಬಿಗೆ ಬಲಿಯಾಗಿ ಹೊರನಡೆದರು.
ನಿನ್ನೆ ಕರ್ನಾಟಕದ ಉತ್ತಮ ಬ್ಯಾಟಿಂಗ್ ಎದುರು ವಿಕೆಟ್ ಪಡೆಯಲು ಪರದಾಡುತ್ತಿದ್ದ ಮಹಾರಾಷ್ಟ್ರ ಬೌಲರ್‌ಗಳು ಇಂದು ಪ್ರಮುಖ ಐದು ವಿಕೆಟ್‌ಗಳನ್ನು ಕಬಳಿಸುವುದರಲ್ಲಿ ಯಶಸ್ವಿಯಾದರು. ಮಹಾರಾಷ್ಟ್ರದ ಪರ ಎ.ಫಲ್ಹಾ ಮತ್ತು ಎಸ್ ಮುಂಡೆ ಅವರು ತಲಾ 2 ವಿಕೆಟ್ ಪಡೆಯುವುದರೊಂದಿಗೆ ಮಹಾರಾಷ್ಟ್ರ ತಿರುಗಿ ಬೀಳಲು ನೆರವಾದರು. ಪ್ರಸ್ತುತ ಅಮಿತ್ ವರ್ಮಾ ಮತ್ತು ಎಸ್ ಗೋಪಾಲ್ ಅವರು ಕ್ರೀಸ್‌ನಲ್ಲಿದ್ದು, ಕರ್ನಾಟಕ ತಂಡ ಒಟ್ಟು 142 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.