'ಆಪ್' ಭ್ರಷ್ಟರ ಪಟ್ಟಿಗೆ ಸೋನಿಯಾ, ಮೋದಿ ಸೇರ್ಪಡೆ
'ಆಪ್' ಭ್ರಷ್ಟ ರಾಜಕಾರಣಿಗಳ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ.
ನವದೆಹಲಿ: ಆಮ್ ಆದ್ಮಿ ಪಕ್ಷ ಬಿಡುಗಡೆ ಮಾಡಿದ್ದ ಭ್ರಷ್ಟ ರಾಜಕಾರಣಿಗಳ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ.
ದೆಹಲಿಯಲ್ಲಿ ಇಂದು ನಡೆದ ಆಮ್ ಆದ್ಮಿ ಪಕ್ಷದ ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ವೇಳೆ 'ಆಪ್' ಭ್ರಷ್ಟ ರಾಜಕಾರಣಿಗಳ ಪಟ್ಟಿಗೆ ಸೋನಿಯಾ ಮತ್ತು ನರೇಂದ್ರ ಮೋದಿ ಅವರ ಹೆಸರನ್ನು ಸೇರಿಸಲಾಗಿದೆ. ಸಭೆಯ ಬಳಿಕ ಮಾತನಾಡಿದ 'ಆಪ್' ಪಕ್ಷದ ಮುಖಂಡ ಗೋಪಾಲ್ ರಾಯ್ ಅವರು, 'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಅವರು ಭ್ರಷ್ಟ ರಾಜಕಾರಣಿಗಳಾಗಿದ್ದು, ಭ್ರಷ್ಟರಿಗೆ ಅವರು ರಕ್ಷಣೆ ನೀಡುವ ಮೂಲಕ ಭ್ರಷ್ಟಾಚಾರದ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ನೀಚ ರಾಜಕಾರಣಕ್ಕೆ ನಾವು ಅಂತ್ಯ ಹಾಡಹೇಕಿದೆ' ಎಂದು ಹೇಳಿದರು.
ನಿನ್ನೆಯಷ್ಟೇ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ಬಹಿರಂಗಗೊಳಿಸಿದ್ದ ಭ್ರಷ್ಟ ರಾಜಕಾರಣಿಗಳ ಪಟ್ಟಿಯ ಕುರಿತು ದೇಶಾದ್ಯಂತ ವ್ಯಾಪಕ ಚರ್ಚೆಯಾಗಿತ್ತು. ಪಟ್ಟಿಯಲ್ಲಿ ತಮ್ಮ ತಮ್ಮ ಹೆಸರನ್ನು ಕಂಡ ರಾಜಕಾರಣಿಗಳು ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ಟೀಕಾಸ್ತ್ರಗಳನ್ನೇ ಹರಿಬಿಟ್ಟಿದ್ದರು. ಇದೀಗ ಪಟ್ಟಿಗೆ ಸೋನಿಯಾ ಗಾಂಧಿ ಮತ್ತು ನರೇಂದ್ರ ಮೋದಿ ಅವರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ.