ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾಯಿ ಬೊಗಳಿದ್ದಕ್ಕೇ 10 ವರ್ಷ ಜೈಲಲ್ಲಿದ್ದ ಭೂಪತಿ

ಕೊಲೆ ಪ್ರಕರಣದ ವಿಚಾರಣೆ ವೇಳೆ ಪೊಲೀಸ್..

Srinivasa Murthy VN
Updated On : 1 Feb 2014, 7:46 am

ಮುಂಬೈ: ಕೊಲೆ ಪ್ರಕರಣದ ವಿಚಾರಣೆ ವೇಳೆ ಪೊಲೀಸ್ ನಾಯಿ ಬೊಗಳಿದ್ದಕ್ಕೆ ಮುಂಬೈ ಮೂಲದ ಆಸಾಮಿಯೊಬ್ಬ 10 ವರ್ಷ ಜೈಲು ವಾಸ ಅನುಭವಿಸಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಪೊಲೀಸ್ ನಾಯಿ ಬೊಗಳಿದ್ದಕ್ಕೇ ಮುಂಬೈ ಮೂಲದ ರಾಜಾರಾಂ ಬಾಬರ್ ಎಂಬ ವಕ್ತಿ ಸುಮಾರು 10 ವರ್ಷಗಳ ಕಾಲ ಸೆರವಾಸ ಅನುಭವಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಬಾಂಬೆ ಹೈಕೋರ್ಟ್‌ನ ಮಧ್ಯ ಪ್ರವೇಶದಿಂದಾಗಿ ರಾಜಾರಾಂ ಬಾಬರ್‌ಗೆ ಇದೀಗ ಸೆರೆವಾಸದಿಂದ ಮುಕ್ತಿ ಪ್ರಾಪ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾ.ಪಿ.ವಿ.ಹರಿದಾಸ್ ಮತ್ತು ನ್ಯಾ.ಅಜಯ್ ಗಡ್ಕರಿ ಅವರು ರಾಜಾರಾಂ ಬಾಬರ್‌ನನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ.

'10 ವರ್ಷಗಳ ಹಿಂದಿನ ಈ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿ ರಾಜಾರಾಂ ಬಾಬರ್‌ನ ನೇರ ಕೈವಾಡವಿರುವ ಕುರಿತು ಯಾವುದೇ ಸಾಕ್ಷ್ಯಾಧಾರಾಗಳಿಲ್ಲ. ಆದರೆ ಪೊಲೀಸರು ಸಲ್ಲಿಸಿರುವ ತನಿಖಾ ವರದಿಯಲ್ಲಿರುವಂತೆ ವಾಸನೆ ಹಿಡಿದು ನಾಯಿ ಈತನನ್ನು ಗುರುತಿಸಿರಬಹುದು. ಆದರೆ ಇದನ್ನೇ ಪ್ರಮುಖ ಸಾಕ್ಷಿಯನ್ನಾಗಿ ಸ್ವೀಕರಿಸಲಾಗುವುದಿಲ್ಲ. ಅಂತೆಯೇ ಮೃತರ ಸಂಬಂಧಿಗಳ ಸಾಕ್ಷಿಗಳನ್ನು ಪೂರಕ ಸಾಕ್ಷಿಗಳಾಗಿ ಪರಿಗಣಿಸಲಾಗುತ್ತದೆಯೇ ಹೊರತು, ಪ್ರಮುಖ ಸಾಕ್ಷ್ಯಾಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ ಸ್ನಿಫರ್ ಡಾಗ್ ಸಾಕ್ಷಿಯ ಮೇಲೆ ಪ್ರಕರಣದ ತೀರ್ಪು ನೀಡುವುದು ನ್ಯಾಯಯುತವಲ್ಲ'.

'ಏಕೆಂದರೆ ರಕ್ತದ ಕಲೆ ಮೆತ್ತಿದ್ದ ಕಲ್ಲನ್ನು ಆರೋಪಿ ರಾಜಾರಾಂ ಬಾಬರ್ ಕೂಡ ಮುಟ್ಟಿರ ಬಹುದು. ಹೀಗಾಗಿಯೇ ಕಲ್ಲಿನ ಮೇಲೆ ಆತನ ವಾಸನೆ ಮೂಡಿರಬಹುದು. ಆದ್ದರಿಂದ ಪ್ರಕರಣದಲ್ಲಿ ರಾಜಾರಾಂ ಬಾಬರ್‌ನ ನೇರ ಕೈವಾಡವಿರುವುದು ಸ್ವಷ್ಟವಾಗಿಲ್ಲ. ಹೀಗಾಗಿ ಬಂಧಿತ ರಾಜಾರಾಂ ಬಾಬರ್ ವಿರುದ್ಧ ಯಾವುದೇ ಇತರೆ ಪ್ರಕರಣಗಳು ದಾಖಲಾಗಿರದಿದ್ದರೆ ಆತನನ್ನು ಕೂಡಲೇ ಬಂಧಮುಕ್ತಗೊಳಿಸಬೇಕು' ಎಂದು ಎಂದು ದ್ವಿಸದಸ್ಯ ನ್ಯಾಯಪೀಠ ಆದೇಶಿಸಿದೆ.

ಏನಿದು ಪ್ರಕರಣ...?
ಸುಮಾರು 10 ವರ್ಷಗಳ ಹಿಂದೆ ಅಂದರೆ 2004ರ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬೈನ ಸೋಲಾಪುರದ ನಿವಾಸದ ಮುಂಭಾಗದಲ್ಲ್ಲಿ ಜೋಡಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಅಂದು ಆ ಮನೆಯ ಮಾಲಕಿ ಸುಭದ್ರಾ ಬಾಯ್ ಮತ್ತು ಆಕೆಯ ಪರಿಚಾರಕನ ಹತ್ಯೆಯಾಗಿತ್ತು. ಘಟನಾ ಸ್ಥಳದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಅಲ್ಲಿ ರಕ್ತ ಮೆತ್ತಿದ್ದ ಕಲ್ಲನ್ನು ಹೊರತು ಪಡಿಸಿದರೆ ಬೇರಾವುದೇ ಸಾಕ್ಷ್ಯಾಧಾರಗಳು ಪತ್ತೆಯಾಗಿರಲಿಲ್ಲ.

ಕೊನೆಗೆ ಇದನ್ನೇ ಸಾಕ್ಷ್ಯಾಧಾರವೆಂದು ಪರಿಗಣಿಸಿದ ಪೊಲೀಸರು, ಅಪರಾಧಿಯ ಪತ್ತೆಗಾಗಿ ಆ ಮನೆಗೆ ಬಂದುಹೋಗುತ್ತಿದ್ದವರ ಪೈಕಿ ಹಲವರನ್ನು ಗುರುತಿಸಿ ಅವರನ್ನು ವಿಚಾರಣೆಗೊಳಪಡಿಸಿದರು. ಆಗಲೂ ಪೊಲೀಸರಿಗೆ ಯಾವುದೇ ಸಾಕ್ಷಿಗಳು ದೊರೆಯಲಿಲ್ಲ. ಅದೇ ವೇಳೆ ಮನೆಯ ಮಾಲಕಿ ಸುಭದ್ರಬಾಯ್ ಮತ್ತು ರಾಜಾರಾಂ ಬಾಬರ್ ನಡುವೆ ನೀರಿನ ಪೈಪ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವೇರ್ಪ್ಪಟ್ಟಿದ್ದ ಅಂಶವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆಗ ರಾಜಾರಾಂ ಬಾಬರ್‌ನನ್ನು ಕರೆಸಿ ವಿಚಾರಿಸಿದ ಪೊಲೀಸರಿಗೆ ಯಾವುದೇ ಸುಳಿವು ದೊರೆಯಲಿಲ್ಲ.

ಕೊನೆಗೆ ಪೊಲೀಸರು ಸ್ನಿಫರ್ ಡಾಗ್‌ಗಳ ಮೊರೆ ಹೋದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಪ್ರತ್ಯೇಕಿಸಿ ಅವರನ್ನು ಸಾಲಲ್ಲಿ ನಿಲ್ಲಿಸಿದರು. ಅದೇ ಸಾಲಲ್ಲಿ ರಾಜಾರಾಂ ಬಾಬರ್‌ನನ್ನು ಕೂಡ ನಿಲ್ಲಿಸಲಾಗಿತ್ತು. ರಕ್ತದ ಕಲೆ ಇದ್ದ ಕಲ್ಲಿನ ವಾಸನೆ ಪಡೆದಿದ್ದ ನಾಯಿ ರಾಜಾರಾಂ ಬಾಬರ್ ಬಳಿ ಬಂದು ಬೊಗಳಿತು. ಹೀಗಾಗಿ ಪೊಲೀಸರು ರಾಜಾರಾಂ ಬಾಬರ್ ವಿರುದ್ಧ ಪ್ರಕರಣ ದಾಖಲಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ವರದಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಸ್ನಿಫರ್ ಡಾಗ್ ಸಾಕ್ಷಿ ಮತ್ತು ಮೃತಳ ಮಕ್ಕಳ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಂಡು ರಾಜಾರಾಂ ಬಾಬರ್‌ಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ 2005ರಲ್ಲಿ ರಾಜಾರಾಂ ಬಾಬರ್ ಹೈಕೋರ್ಟ್ ಮೊರೆ ಹೋದರು. ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಎಲ್ಲ ರೀತಿಯ ಸಾಕ್ಷ್ಯಾಧಾರಗಳನ್ನು ಪರೀಕ್ಷಿಸಿತು. ಈ ವೇಳೆ ಪೊಲೀಸರು ಸಲ್ಲಿಸಿರುವ ಸಾಕ್ಷಿಗಳ ಪೈಕಿ ಹಲವು ಯಡವಟ್ಟುಗಳು ಕಂಡುಬಂದವು. ಆ ಪೈಕಿ ಮೃತ ಸುಭದ್ರಾ ಬಾಯ್ ಅವರ ಮಕ್ಕಳ ಹೇಳಿಕೆ ಮತ್ತು ಪೊಲೀಸ್ ನಾಯಿ ಬೊಗಳಿದನ್ನು ಕೂಡ ಪೊಲೀಸರು ಪ್ರಮುಖ ಸಾಕ್ಷಿಗಳೆಂದು ಪರಿಗಣಿಸಿದ್ದ ಅಂಶ ಬೆಳಕಿಗೆ ಬಂದಿತು.

ಇದೀಗ ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್ ತನ್ನ ತೀರ್ಪಿನಲ್ಲಿ 'ಮೃತರ ಸಂಬಂಧಿಗಳ ಸಾಕ್ಷಿಗಳನ್ನು ಪೂರಕ ಸಾಕ್ಷಿಗಳಾಗಿ ಪರಿಗಣಿಸಲಾಗುತ್ತದೆಯೇ ಹೊರತು ಪ್ರಮುಖ ಸಾಕ್ಷ್ಯಾಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ ಸ್ನಿಫರ್ ಡಾಗ್ ಸಾಕ್ಷಿಯ ಮೇಲೆ ಪ್ರಕರಣದ ತೀರ್ಪು ನೀಡುವುದು ನ್ಯಾಯಯುತವಲ್ಲ. ಏಕೆಂದರೆ ರಕ್ತದ ಕಲೆ ಮೆತ್ತಿದ್ದ ಕಲ್ಲನ್ನು ಆರೋಪಿ ರಾಜಾರಾಂ ಬಾಬರ್ ಕೂಡ ಮುಟ್ಟಿರ ಬಹುದು. ಹೀಗಾಗಿಯೇ ಕಲ್ಲಿನ ಮೇಲೆ ಆತನ ವಾಸನೆ ಮೂಡಿರಬಹುದು. ಆದ್ದರಿಂದ ಪ್ರಕರಣದಲ್ಲಿ ರಾಜಾರಾಂ ಬಾಬರ್‌ನ ನೇರ ಕೈವಾಡವಿರುವುದು ಸ್ವಷ್ಟವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಒಟ್ಟಾರೆ ಪೊಲೀಸ್ ನಾಯಿ ಬೊಗಳಿದ್ದರಿಂದ ಸೆರವಾಸ ಅನುಭವಿಸಿದ್ದ ರಾಜಾರಾಂ ಬಾಬರ್, ಹೈಕೋರ್ಟ್‌ನ ಮಧ್ಯ ಪ್ರವೇಶದಿಂದಾಗಿ ಬಂಧಮುಕ್ತಿಗೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement