ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಗುಂಟೂರು' ನೂತನ ಆಂಧ್ರ ಪ್ರದೇಶದ ರಾಜಧಾನಿ..?

ವಿಭಜಿತ ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ಗುಂಟೂರು ಜಿಲ್ಲೆ ಆಯ್ಕೆಯಾಗುವ ಸಾಧ್ಯತೆಗಳಿವೆ..

Srinivasa Murthy VN
Updated On : 7 Jul 2014, 5:59 am

ಹೈದರಬಾದ್: ವಿಭಜಿತ ಆಂಧ್ರ ಪ್ರದೇಶ ರಾಜ್ಯದ ನೂತನ ರಾಜಧಾನಿಯಾಗಿ ಗುಂಟೂರು ಜಿಲ್ಲೆ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಗುಂಟೂರು ಆಂಧ್ರ ಪ್ರದೇಶದ ರಾಜಧಾನಿ..? ಇಂತಹುದೊಂದು ಪ್ರಶ್ನೆ ಇದೀಗ ಆಂಧ್ರ ಪ್ರದೇಶದಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಈ ಬೆಳವಣಿಗೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಕಾರಣ ಎನ್ನಲಾಗುತ್ತಿದೆ. ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ನಾಯ್ಡು ಅವರು, 'ಗುಂಟೂರನ್ನು ರಾಜಧಾನಿಯನ್ನಾಗಿ ಮಾಡಲು ಸಾಕಷ್ಟು ಶ್ರಮಿಸಬೇಕಿದೆ ಎಂದು ಹೇಳುವ ಮೂಲಕ ಇಂತಹುದೊಂದು ಚರ್ಚೆಗೆ ಕಾರಣರಾಗಿದ್ದಾರೆ.

ಈ ಹಿಂದೆ ಪಕ್ಷದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ನಾಯ್ಡು ಅವರು ಗುಂಟೂರು ಜಿಲ್ಲೆಗೆ ಔಟರ್ ರಿಂಗ್ ರೋಡ್‌ಗಳನ್ನು ನಿರ್ಮಿಸಲು ಸುಮಾರು 20 ಸಾವಿರ ಕೋಟಿ ರು.ಗಳು ಖರ್ಚಾಗುತ್ತವೆ. ಇದಕ್ಕಾಗಿ ಕೇಂದ್ರದ ಮೇಲೆ ಸತತ ಒತ್ತಡ ಹೇರಬೇಕಿದೆ. ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪರ್ಕಿಸುವ ಮೆಟ್ರೋ ರೈಲು ಯೋಜನೆಯನ್ನು ತರಲು ಕೂಡ ಸಾಕಷ್ಟು ಪ್ರಯಾಸ ಪಡಬೇಕಿದೆ ಎಂದು ಹೇಳಿದ್ದಾರೆ.

ನಾಯ್ಡು ಅವರ ಈ ಮಾತುಗಳೇ ಗುಂಟೂರು ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆಗೆ ಬಲ ನೀಡಿವೆ. ಇವಿಷ್ಟೇ ಅಲ್ಲದೇ ನಿನ್ನೆ ಅಂದರೆ ಭಾನುವಾರ ನಡೆದ ಸಂಸದರ ಸಭೆಯಲ್ಲಿಯೂ ಕೂಡ ಚಂದ್ರಬಾಬು ನಾಯ್ಡು ಅವರು ಇದೇ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ತಮ್ಮ ಸಂಸದರೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ ವಿಭಜಿತ ಆಂಧ್ರಪ್ರದೇಶಕ್ಕೆ ನೂತನ ರಾಜಧಾನಿಯಾಗಿ ಗುಂಟೂರು ಜಿಲ್ಲೆ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯಾಗದಿದ್ದರೂ ಗುಂಟೂರು ಜಿಲ್ಲೆಯೇ ಮುಂದಿನ ಸೀಮಾಂಧ್ರದ ರಾಜಧಾನಿಯಾಗಿ ಆಯ್ಕೆಯಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತೆಲಂಗಾಣ ರಾಜ್ಯಕ್ಕೆ ಈಗಾಗಲೇ ರಾಜಧಾನಿಯಾಗಿ ಪ್ರಸ್ತುತ ಜಂಟಿ ರಾಜಧಾನಿಯಾಗಿರುವ ಹೈದರಬಾದ್ ನಗರವನ್ನೇ ಆಯ್ಕೆ ಮಾಡಲಾಗಿದ್ದು, ವಿಭಜಿತ ಆಂಧ್ರಪ್ರದೇಶಕ್ಕೆ ಗುಂಟೂರು, ಅನಂತಪುರ ಅಥವಾ ವಿಶಾಖಪಟ್ಟಣವನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು. ಇದೀಗ ಬದಲಾದ ಪರಿಸ್ಥಿತಿಯಲ್ಲಿ ಗುಂಟೂರು ಜಿಲ್ಲೆಯ ಹೆಸರು ರಾಜಧಾನಿ ಪಟ್ಟಿಯಲ್ಲಿ ಬಲವಾಗಿ ಕೇಳಿಬರುತ್ತಿದೆ. ಮುಂದಿನ ಹತ್ತು ವರ್ಷಗಳ ಅವಧಿಗೆ ಮಾತ್ರ ಉಭಯ ರಾಜ್ಯಗಳಿಗೆ ಹೈದರಬಾದ್ ನಗರ ಜಂಟಿ ರಾಜಧಾನಿಯಾಗಿರಲಿದ್ದು, ಬಳಿಕ ಅದು ತೆಲಂಗಾಣ ರಾಜ್ಯದ ಅಧಿಕೃತ ರಾಜಧಾನಿಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement