ಪ್ರವಾಸಿ ತಾಣವಾಗಿ ಗಂಗೆ: ಕೇಂದ್ರ ಸರ್ಕಾರ
ಗಂಗಾನದಿಯ ಸ್ವಚ್ಛತಾ ಯೋಜನೆ ಪ್ರಗತಿಯಲ್ಲಿದ್ದು, ಗಂಗಾನದಿಯನ್ನು ಪ್ರಮುಖ ಪ್ರವಾಸಿ ತಾಣಗಳಲ್ಲಿ..
ನವದೆಹಲಿ: ಗಂಗಾನದಿಯ ಸ್ವಚ್ಛತಾ ಯೋಜನೆ ಪ್ರಗತಿಯಲ್ಲಿದ್ದು, ಗಂಗಾನದಿಯನ್ನು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗುವಂತೆ ಮಾಡಬೇಕೆಂದು ಪ್ರವಾಸೋದ್ಯಮ ಸಚಿವಾಲಯ ನಿರ್ಧರಿಸಿದೆ.
ಗಂಗಾ ಸ್ವಚ್ಛತಾ ರಾಷ್ಟ್ರೀಯ ಸಮಿತಿ ಆಯೋಜಿಸಿದ್ದ 'ಗಂಗಾ ಮಂಥನ್-ನ್ಯಾಶನಲ್ ಡೈಲಾಗ್ ಆನ್ ಗಂಗಾ' ಎಂಬ ಕಾರ್ಯಕ್ರಮವೊಂದರಲ್ಲಿ ಸಮಾಲೋಚನೆ ನಡೆಸಿದ ಸಾಂಸ್ಕೃತಿಕ ಒಕ್ಕೂಟ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಅವರು, 'ಗಂಗಾ ನದಿಯ ಉದ್ದಕ್ಕೂ ಅಣೆಕಟ್ಟು ಹಾಗೂ ದೋಣಿಮನೆಗಳ ನಿರ್ಮಾಣದ ಬಗ್ಗೆ ಯೋಜನೆಯನ್ನು ರೂಪಿಸಲಾಗಿದೆ. ಗಂಗೋತ್ರಿಯಿಂದ ಗಂಗಾಸಾಗರದ ಎಲ್ಲಾ ಘಟ್ಟಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಮತ್ತು ಪ್ರಮುಖ ಪ್ರವಾಸಿ ತಾಣವಾಗಿರುವ ಕಾಶ್ಮೀರದ ಹಾಗೆಯೇ ಗಂಗಾ ತೀರವನ್ನು ಪ್ರವಾಸಿ ತಾಣವಾಗಿ ನಿರ್ಮಾಣಲಾಗುವುದು ಎಂದು ತಿಳಿಸಿದರು.
ಅಂತರ್ಜಾಲದಲ್ಲಿ ಗಂಗಾ ಸಂರಕ್ಷಣೆ ಮಾಹಿತಿ
ಇದೇ ವೇಳೆ ಮಾತನಾಡಿರುವ ಗಂಗಾ ಸ್ವಚ್ಛತಾ ಸಮಿತಿಯ ಅಧ್ಯಕ್ಷೆ ಮತ್ತು ಕೇಂದ್ರ ಸಚಿವೆ ಉಮಾ ಭಾರತಿ ಅವರು, ಗಂಗಾನದಿಯ ಸಂರಕ್ಷಣೆ ಯೋಜನೆಗಾಗಿ ಸರ್ಕಾರ ಈಗಾಗಲೇ ಅಂತರ್ಜಾಲ ವಿಳಾಸವನ್ನು ಸೃಷ್ಟಿಸಲು ನಿರ್ಧರಿಸಿದ್ದು, ಸಾಧ್ಯವಾದಷ್ಟು ಬೇಗ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
'ಜನರ ಸಲಹೆಗಳೂ ನಮಗೆ ಅತೀ ಮುಖ್ಯವಾದ್ದರಿಂದ ಅವರಿಗೂ ಸೂಕ್ತ ವೇದಿಕೆಯೊಂದನ್ನು ನಿರ್ಮಾಣ ಮಾಡುವುದು ನಮ್ಮ ಜವಾಬ್ದಾರಿಯುತ ಕಾರ್ಯವಾಗಿದೆ. ಹಾಗಾಗಿ ಸಾರ್ವಜನಿಕರೂ ಸಹ ಗಂಗೆಯನ್ನು ಸ್ವಚ್ಛಗೊಳಿಸುವುದರ ಬಗ್ಗೆ ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ತಿಳಿಸಲು ವೆಬ್ ವಿಳಾಸ ಸೂಕ್ತ ವೇದಿಕೆಯಾಗಿದೆ. ಈ ಬಗ್ಗೆ ಇನ್ನು ಮೂರ್ನಾಲ್ಕು ದಿನದಲ್ಲಿ ಸಭೆಯನ್ನು ಏರ್ಪಡಿಸಿ ಗಂಗಾ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯದ ಬಗ್ಗೆಯೂ ಚರ್ಚೆ ನಡೆಸಲಾಗುವುದು, ಗಂಗೆಯೊಂದೇ ಅಲ್ಲದೇ ಉಳಿದ ಎಲ್ಲಾ ನದಿಗಳ ಸಂರಕ್ಷಣೆ ಹಾಗೂ ಹೊಸ ತಂತ್ರಜ್ಞಾನದ ಮೂಲಕ ಹಳೆಯ ಡ್ಯಾಮ್‌ಗಳ ಸಂರಕ್ಷಣೆಯನ್ನು ಹೇಗೆ ಮಾಡಬಹುದು ಎಂಬಿತ್ಯಾದಿ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಈಗಾಗಲೇ ಗಂಗಾ ತೀರದ ಪ್ರತಿ ಕಿಲೋಮೀಟರ್‌ನಂತೆ ಒಂದೊಂದು ಡ್ಯಾಮ್‌ಗಳನ್ನು ನಿರ್ಮಿಸುವ ಬಗ್ಗೆ ಪ್ರಸ್ತಾವನೆಗಳಿವೆ ಎಂದಿದ್ದಾರೆ.
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಗಂಗಾ ಸ್ವಚ್ಛತಾ ಮತ್ತು ಅಭಿವೃದ್ಧಿ ಯೋಜನೆಗೆ ವೇಗ ದೊರೆತಿದೆ.