ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೇನಾ ಮುಖ್ಯಸ್ಥರ ನೇಮಕಾತಿಗೆ ತಡೆ ಏಕೆ..?: "ಸುಪ್ರೀಂ' ಪ್ರಶ್ನೆ

ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ದಲ್ಬೀರ್ ಸಿಂಗ್ ಸುಹಾಗ್ ಅವರ ನೇಮಕಾತಿಗೆ ತಡೆ ಏಕೆ ನೀಡಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

Srinivasa Murthy VN
Updated On : 7 Jul 2014, 3:55 am

ನವದೆಹಲಿ: ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ದಲ್ಬೀರ್ ಸಿಂಗ್ ಸುಹಾಗ್ ಅವರ ನೇಮಕಾತಿಗೆ ತಡೆ ಏಕೆ ನೀಡಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಲೆ.ಜ.ದಲ್ಬೀರ್ ಸಿಂಗ್ ಸುಹಾಗ್ ಅವರ ನೇಮಕಾತಿ ಅಕ್ರಮ ಎಂದು ಆರೋಪಿಸಿ ಲೆಫ್ಟಿನೆಂಟ್ ಜನರಲ್ ರವಿ ದಸ್ತಾನೆ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಟಿ.ಎಸ್.ಠಾಕೂರ್ ಅವರು ದಲ್ಬೀರ್ ಸಿಂಗ್ ಸುಹಾಗ್ ಅವರ ನೇಮಕಾತಿ ತಡೆಗೆ ನಕಾರಾ ವ್ಯಕ್ತಪಡಿಸಿದ್ದಾರೆ.

ಸೇನಾಮುಖ್ಯಸ್ಥರ ಸ್ಥಾನಕ್ಕೆ ದಲ್ಬೀರ್ ಸಿಂಗ್ ಸುಹಾಗ್ ಅವರ ನೇಮಕ ಪ್ರಕ್ರಿಯೆ ಕಾನೂನಾತ್ಮಕವಾಗಿಯೇ ಇದ್ದು, ದೂರುದಾರರು ಸಲ್ಲಿಸಿರುವಂತೆ ಸುಹಾಗ್ ನೇಮಕಾತಿಯಲ್ಲಿ ಯಾವುದೇ ಅಕ್ರಮಗಳಾಗಿಲ್ಲ ಎಂದೆನಿಸುತ್ತಿದೆ. ಸುಹಾಗ್ ಅವರು ಸೇನಾ ನೀತಿ ನಿಯಮಾವಳಿಗಳ ಪ್ರಕಾರ ಮುಖ್ಯಸ್ಥರ ಹುದ್ದೆಗೆ ಇರಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ. ಅಲ್ಲದೆ ವಯಸ್ಸಿನ ಆಧಾರದ ಮೇಲೆ ಸೇನೆಯ ಹಿರಿಯ ಅಧಿಕಾರಿಗಳ ಪಟ್ಟಿಯಲ್ಲಿ ಅವರೇ ಮೊದಲಿಗರಾಗಿದ್ದಾರೆ. ಹೀಗಿರುವಾಗ ಅವರ ನೇಮಕಾತಿಯನ್ನು ಏಕೆ ತಡೆಯಬೇಕು..? ಎಂದು ನ್ಯಾ.ಟಿ.ಎಸ್.ಠಾಕೂರ್ ಅವರು ಪ್ರಶ್ನಿಸಿದ್ದಾರೆ.

ಈ ಹಿಂದೆ ನೂತನ ಸೇನಾ ಮುಖ್ಯಸ್ಥ ಸ್ಥಾನಕ್ಕೆ ದಲಬೀರ್ ಸಿಂಗ್ ಸುಹಾಗ್ ಅವರನ್ನು ನೇಮಕ ಮಾಡಿದ ಕ್ರಮವನ್ನು ಲೆಫ್ಟಿನೆಂಟ್ ಜನರಲ್ ರವಿ ದಸ್ತಾನಿ ಅವರು ವಿರೋಧಿಸಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ತನ್ನ ಕೊನೆಯ ಅವಧಿಯಲ್ಲಿ ದುರುದ್ದೇಶಪೂರ್ವಕವಾಗಿ ಸೇನಾ ಮುಖ್ಯಸ್ಥ ಸ್ಥಾನವನ್ನು ಭರ್ತಿ ಮಾಡಿದೆ. ತಮಗೆ ಅನುಕೂಲವಾಗುವಂತಹ ಅಧಿಕಾರಿಯನ್ನು ಪ್ರಮುಖ ಹುದ್ದೆಗೆ ನೇಮಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸುಹಾಗ್ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿ.ಕೆ.ಸಿಂಗ್
ನೂತನ ಸೇನಾ ಮುಖ್ಯಸ್ಥ ಸ್ಥಾನಕ್ಕೆ ಲೆ.ಜ.ದಲ್ಬೀರ್ ಸಿಂಗ್ ಸುಹಾಗ್ ಅವರನ್ನು ನೇಮಕ ಮಾಡಿದ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 'ದಲ್ಬೀರ್ ಸಿಂಗ್ ಸುಹಾಗ್ ಅವರನ್ನು ಸೇನಾ ಮುಖ್ಯಸ್ಥರಾಗಿ ನೇಮಕ ಮಾಡಿರುವ ಕೇಂದ್ರ ಸರ್ಕಾರ ಕ್ರಮ ಸರಿಯಲ್ಲ. ನಾನು ಸೇನಾ ಮುಖ್ಯಸ್ಥನಾಗಿದ್ದಾಗ ಕರ್ತವ್ಯಲೋಪದ ಮೇಲೆ ಸುಹಾಗ್ ಅವರನ್ನು ಅಮಾನತು ಮಾಡಲಾಗಿತ್ತು. ಸೇನಾ ನಿಯಮಗಳ ಪ್ರಕಾರ ಶಿಕ್ಷೆಗೆ ಗುರಿಯಾದ ಅಧಿಕಾರಿಗಳನ್ನು ಮುಖ್ಯಸ್ಥ ಹುದ್ದೆಗೆ ಪರಿಗಣಿಸುವಂತಿಲ್ಲ. ಹೀಗಿದ್ದು ಸುಹಾಗ್ ಅವರನ್ನು ಕೇಂದ್ರ ಸರ್ಕಾರ ಅದಾವ ಮಾನದಂಡದ ಮೇಲೆ ಸೇನಾ ಮುಖ್ಯಸ್ಥರಾಗಿ ನೇಮಕ ಮಾಡಿದೆ ಎಂದು ತಿಳಿಯುತ್ತಿಲ್ಲ' ಎಂದು ಕಿಡಿಕಾರಿದ್ದರು.

ವಿವಾದಕ್ಕೀಡಾಗಿದ್ದ ಸುಹಾಗ್ ನೇಮಕ ಪ್ರಕ್ರಿಯೆ
ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಕೊನೆಯ ಅವಧಿಯಲ್ಲಿ ದಲ್ಬೀರ್ ಸಿಂಗ್ ಸುಹಾಗ್ ಅವರನ್ನು ಸೇನಾ ಮುಖ್ಯಸ್ಥರಾಗಿ ಆಯ್ಕೆ ಮಾಡಿತ್ತು. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೇಶದ ರಾಜಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿತ್ತು. ಅಲ್ಲದೆ ಅಧಿಕಾರದ ಕೊನೆಯ ಘಟದಲ್ಲಿ ಸೇನಾಮುಖ್ಯಸ್ಥರನ್ನು ನೇಮಕ ಮಾಡಿದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿತ್ತು. ಅಲ್ಲದೆ ಮಾಧ್ಯಮಗಳಲ್ಲಿಯೂ ಈ ವಿಚಾರ ತೀವ್ರ ವಿವಾದಕ್ಕೀಡಾಗಿತ್ತು.

ಇದೇ ಜುಲೈ 31ರಂದು ಹಾಲಿ ಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಕ್ರಮ್ ಸಿಂಗ್ ಅವರು ನಿವೃತ್ತರಾಗಲಿದ್ದು, ದಲ್ಬೀರ್ ಸಿಂಗ್ ಸುಹಾಗ್ ಅವರು ನೂತನ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ ವಿವಾದಕ್ಕೀಡಾಗಿರುವ ಅವರ ನೇಮಕಾತಿಗೆ ನೂತನ ಎನ್‌ಡಿಎ ಸರ್ಕಾರ ಅಡ್ಡಿಯಾಗುವ ಸಾಧ್ಯತೆ ಇದೆ. ಈ ಹಿಂದೆ ದಲ್ಬೀರ್ ಸಿಂಗ್ ಸುಹಾಗ್ ಅವರ ನೇಮಕ ಪ್ರಕ್ರಿಯೆ ಕುರಿತು ಕಿಡಿಕಾರಿದ್ದ ಜ.ವಿ.ಕೆ.ಸಿಂಗ್ ಅವರು ಪ್ರಸ್ತುತ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದು, ಮುಂದೆ ಈ ಪ್ರಕರಣ ಇನ್ನಾವ ತಿರುವು ಪಡೆಯಲಿದೆ ಎಂದು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement