ಸಿಗರೇಟ್ ನೀಡಲು ನಿರಾಕರಿಸಿದ್ದಕ್ಕೇ ಯುವಕನ ಕೊಲೆ
ಕುಡುಕರಿಬ್ಬರು ತಮಗೆ ಸಿಗರೇಟ್ ನೀರಾಕರಿಸಿದಕ್ಕೇ ಯುವಕ..
ಘಾಜಿಯಾಬಾದ್: ಕುಡುಕರಿಬ್ಬರು ತಮಗೆ ಸಿಗರೇಟ್ ನೀರಾಕರಿಸಿದಕ್ಕೇ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ.
ಇಷ್ಟು ದಿನ ಬೀದಿ ಕಾಮಣ್ಣರಿಂದ ಕುಖ್ಯಾತಿಗಳಿಸಿದ್ದ ಉತ್ತರ ಪ್ರದೇಶ ಈಗ ಕುಡುಕರಿಂದಾಗಿಯೂ ತನ್ನ ಕು'ಖ್ಯಾತಿ'ಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಕೇವಲ ಸಿಗರೇಟ್ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಡುಕರಿಬ್ಬರು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಂದು ಘಾಜಿಯಾಬಾದ್ನಲ್ಲಿ ನಡೆದಿದೆ. ಘಾಜಿಯಾಬಾದ್ನ ಸಿಯಾನಿ ಗೇಟ್ನ ಬಳಿ ಪ್ರದೀಪ್ ಕುಮಾರ್ ಮತ್ತು ರಾಹುಲ್ ಎಂಬುವವರು ಕಂಠಪೂರ್ತಿ ಕುಡಿದು ನಿರ್ಮಲ್ ಎಂಬ ಯುವಕನನ್ನು ಸಿಗರೇಟ್ ನೀಡಲಿಲ್ಲ ಎಂದು ಕ್ರೋಧಗೊಂಡು ಹತ್ಯೆ ಮಾಡಿದ್ದಾರೆ.
ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ನಿರ್ಮಲ್ನನ್ನು ಕರೆದು ಪ್ರದೀಪ್ ಮತ್ತು ರಾಹುಲ್ ದರ್ಪದಿಂದ, ನಿರ್ಮಲ್ ಬಳಿ ಸಿಗರೇಟ್ ಕೇಳಿದ್ದಾರೆ. ಅವರು ಕೇಳಿದ ದಾಟಿಯಲ್ಲಿಯೇ ತನ್ನ ಬಳಿ ಸಿಗರೇಟ್ ಇಲ್ಲ ಎಂದ ನಿರ್ಮಲ್ ವಿರುದ್ಧ ಕ್ರೋಧಗೊಂಡ ಅವರು ತಮ್ಮ ಬಳಿ ಇದ್ದ ಪಿಸ್ತೂಲ್ ಅನ್ನು ತೆಗೆದು ನಿರ್ಮಲ್ನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ನಿರ್ಮಲ್ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಂತೆಯೇ ಸ್ಥಳದಿಂದ ಇಬ್ಬರೂ ಪರಾರಿಯಾಗಿದ್ದು, ಸ್ಥಳೀಯರು ನಿರ್ಮಲ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ನಿರ್ಮಲ್ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಸಿಯಾನಿಗೇಟ್ ಪೊಲೀಸರು ತಕ್ಷಣವೇ ಪರಾರಿಯಾಗಿದ್ದ ಪ್ರದೀಪ್ ಮತ್ತು ರಾಹುಲ್ರನ್ನು ಬಂಧಿಸಿದ್ದಾರೆ. ಅಲ್ಲದೆ ಅವರ ಬಳಿ ಇದ್ದ ಪಿಸ್ತೂಲ್ ಅನ್ನು ವಶ ಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.