ಕೂಡಗಿ ರೈತರ ಮೇಲಿನ ದೌರ್ಜನ್ಯ: ತನಿಖೆಗೆ ಆಗ್ರಹ
ಬೆಂಗಳೂರು: ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ವಿರುದ್ದ ಹೋರಾಡಿದ ರೈತರ ಮೇಲಿನ ದೌರ್ಜನ್ಯ ಅಮಾನುಷವಾದದ್ದು, ಈ ಬಗ್ಗೆ ಸಾರ್ವಜನಿಕವಾದ ತನಿಖೆಯಾಗಬೇಕು ಎಂದು ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಷ್ಣ ವಿದ್ಯುತ್ ಸ್ಥಾವರದಿಂದ ಸುತ್ತಮುತ್ತಲಿನ ಜನರ ಮೇಲಾಗುವ ಪರಿಣಾಮದ ಕುರಿತು ಸರ್ಕಾರ ಚರ್ಚೆ ನಡೆಸದೆಯೇ ಯೋಜನೆ ಕೈಗೆತ್ತಿಕೊಂಡಿದೆ. ಇದರ ವಿರುದ್ದ ಹೋರಾಡಿದ ನಮ್ಮ ರೈತರ ಮೇಲೂ ವಿನಾಕಾರಣ ಗುಂಡಿನ ದಾಳಿ ಮಾಡಿದೆ ಎಂದು ಆರೋಪಿಸಿದರು.
ಈ ಕುರಿತಂತೆ ಜುಲೈ 21 ರಂದು ರೈತರ ಹುತಾತ್ಮ ದಿನಾಚರಣೆಯಾಗಿದ್ದು, ಬಿಜಾಪುರ ಜಿಲ್ಲೆ, ಬಸವನ ಬಾಗೇವಾಡಿಯ ಮುತ್ತಗಿ ಕ್ರಾಸ್ ಬಳಿ ಸಾರ್ವಜನಿಕ ಅಹವಾಲು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸಾರ್ವಜನಿಕರ ಮುಂದೆಯೇ ಸ್ಥಾವರದ ಕುರಿತು ವೈಜ್ಞಾನಿಕವಾದ ಸಂಶೋಧನೆಯ ಮಾಹಿತಿ ಕಲೆಹಾಕಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸರ್ಕಾರ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ.
ಅವರೂ ಸಹ ಆಗಮಿಸಿ ತಮ್ಮ ವಾದ ಮಂಡಿಸಬೇಕು, ಬರದಿದ್ದ ಪಕ್ಷದಲ್ಲಿ ತಪ್ಪಿತಸ್ಥರೆಂದು ಘೋಷಿಸಿಕೊಳ್ಳಬೇಕಾಗುತ್ತದೆ ಎಂದು ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆಯಲ್ಲಿ ಕಬ್ಬು ಬೆಳೆಗಾರ ಬಗ್ಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ 3,500 ಕೋಟಿ ರುಪಾಯಿಗಳು ಸರ್ಕಾರದಿಂದ ಬರಬೇಕಿದ್ದು, ಪಟ್ಟ ಭದ್ರ ಹಿತಾಸಕ್ತಿಗಳಿಂದ ರೈತರಿಗೆ ತಮ್ಮ ಶ್ರಮದ ಪ್ರತಿಫಲ ಸಿಗದೆ ಅನ್ಯಾಯವಾಗುತ್ತಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್.ಎ.ಪಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಆಲೋಚನೆ ಬಿಟ್ಟು ಈಗಿರುವ ಕಾಯ್ದೆಯನ್ನೇ ಅನುಸರಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸಿದರು.