ಪಾಕ್ನಿಂದ ಕದನ ವಿರಾಮ ಉಲ್ಲಂಘನೆ: ಯೋಧ ಸಾವು
ಪಾಕ್ ಸೈನಿಕರು ಭಾರತೀಯ ಪಡೆಗಳತ್ತ ಗುಂಡಿನ ದಾಳಿ ನಡೆಸಿ ಓರ್ವ ಯೋಧನನ್ನು ಕೊಂದು..
ಜಮ್ಮು: ಪಾಕಿಸ್ತಾನ ಸೈನಿಕರು ಬುಧವಾರ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಪಡೆಗಳತ್ತ ತೀವ್ರ ಗುಂಡಿನ ದಾಳಿ ನಡೆಸಿ ಓರ್ವ ಯೋಧನನ್ನು ಕೊಂದು ಹಾಕಿದ್ದಾರೆ.
ಜಮ್ಮುವಿನ ಆರ್ಎಸ್ ಪುರ ಗಡಿಯಲ್ಲಿ ಪಾಕಿಸ್ತಾನ ಸೈನಿಕರು ಇಂದು ಮಧ್ಯಾಹ್ನದ ಸುಮಾರಿನಲ್ಲಿ ಭಾರತೀಯ ಸೈನಿಕರತ್ತ ಒಂದೇ ಸಮನೆ ಗುಂಡಿನ ಮಳೆಗರೆದಿದ್ದಾರೆ. ಘಟನೆಯಲ್ಲಿ ಬಿಎಸ್ಎಫ್ ಓರ್ವ ಯೋಧ ಸಾವಿಗೀಡಾಗಿದ್ದು, ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯಾವುದೇ ರೀತಿಯ ಪ್ರಚೋದನೆ ಇಲ್ಲದೇ ಪಾಕಿಸ್ತಾನ ಸೈನಿಕರು ಈ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಘಟನೆಯಿಂದ ಇಂಡೋ-ಪಾಕ್ ಗಡಿಯುದ್ದಕ್ಕೂ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪಾಕಿಸ್ತಾನದ ನೀಚ ಕೃತ್ಯಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಗಾಯಾಳು ಯೋಧರನ್ನು ಸೈನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.