ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉಕ್ಕಿ ಹರಿಯುತ್ತಿರುವ ಗಂಗೆ: ಉ.ಖಂಡದಲ್ಲಿ ಪ್ರವಾಹ ಭೀತಿ

ಉತ್ತರಾಖಂಡದಲ್ಲಿ ಸತತ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪವಿತ್ರ ಗಂಗಾ ನದಿ ಉಕ್ಕಿ ಹರಿಯುತ್ತಿದ್ದು, ಮತ್ತೆ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.

Srinivasa Murthy VN
Updated On : 17 Jul 2014, 2:37 am

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸತತ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪವಿತ್ರ ಗಂಗಾ ನದಿ ಉಕ್ಕಿ ಹರಿಯುತ್ತಿದ್ದು, ಮತ್ತೆ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.

ಅಲ್ಲದೆ ಸತತ ಮಳೆಯಿಂದಾಗಿ ಉತ್ತರಾಖಂಡದಲ್ಲಿರುವ ಕೇದಾರನಾಥ್, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಯಾತ್ರಾ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೊಚ್ಚಿ ಹೋಗಿದ್ದು, ಈಗಾಗಲೇ ಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಗಳು ಅಪಾಯಕ್ಕೆ ಸಿಲುಕಿದ್ದಾರೆ. ಹೀಗಾಗಿ ಪ್ರಸ್ತುತ ಚಾರ್ಧಾಮ್ ಯಾತ್ರೆಯನ್ನು ಉತ್ತರಾಖಂಡ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಈ ಪ್ರಮುಖ ಯಾತ್ರಾ ಸ್ಥಳಗಳಲ್ಲಿರುವ ಸ್ಥಳೀಯರು ಇದೀಗ ಅಪಾಯಕ್ಕೆ ಸಿಲುಕಿದ್ದಾರೆ.

ಅಪಾಯಕ್ಕೆ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಾರ್ಯಾಚರಣೆಗೆ ಸತತ ಮಳೆ ಮತ್ತು ಭೂ ಕುಸಿತು ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಅಲ್ಲದೆ ಮಂದಾಕಿನಿ ಮತ್ತು ಅಲಕಾನಂದ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಮಳೆಯ ಪ್ರಮಾಣ ಹೀಗೆಯೇ ಮುಂದುವರೆದರೆ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಿಷಿಕೇಶ ಮತ್ತು ಬದರಿನಾಥ ರಾಷ್ಟ್ರೀಯ ಹೆದ್ದಾರಿ, ಕೇದಾರನಾಥ ಮತ್ತು ಗೌರಿಕುಂಡ ಸಂಪರ್ಕ ರಸ್ತೆಗಳು ಭೂಕುಸಿತಕ್ಕೆ ಒಳಗಾಗಿ ಕೊಚ್ಚಿ ಹೋಗಿರುವುದರಿಂದ ರಸ್ತೆಗಳನ್ನು ಬಂದ್ ಮಾಡಲಾಗಿದೆ.

ಅಲ್ಲದೆ ಕಳೆದ ಮಂಗಳವಾರ ರಾತ್ರಿ ಕಾಳಿಮಠದ ರುದ್ರಪ್ರಯಾಗದಲ್ಲಿ ಸರಸ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಮಳೆಯ ಹೊಡೆತಕ್ಕೆ ಕೊಚ್ಚಿ ಹೋಗಿದ್ದು, ಅಲ್ಲಿ ಯಾತ್ರೆಗೆ ತೆರಳಿ ಅಪಾಯಕ್ಕೆ ಸಿಲುಕಿದ್ದ 164 ಮಂದಿ ಯಾತ್ರಾರ್ಥಿಗಳನ್ನು ನಿರಾಶ್ರಿತರ ಶಿಬಿರಕ್ಕೆ ರವಾನಿಸಲಾಗಿದೆ. ಈ ಮೇಲ್ಸುತುವೆ ನಿರ್ಮಿಸಿ ಕೇವಲ ಒಂದು ವರ್ಷ ಮಾತ್ರ ಆಗಿತ್ತು. ಕಳೆದ ಬಾರಿ ಸಂಭವಿಸಿದ್ದ ಭೀಕರ ಪ್ರವಾಹದಿಂದಾಗಿ ಹಳೆಯ ಸೇತುವೆ ಕೊಚ್ಚಿ ಹೋಗಿತ್ತು. ಹೀಗಾಗಿ ತಾತ್ಕಾಲಿಕ ಸಂಪರ್ಕಕ್ಕಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದೀಗ ಇದು ಕೂಡ ಮಳೆಯ ಹೊಡೆತಕ್ಕೆ ಕೊಚ್ಚಿ ಹೋಗಿದೆ.

ಕಳೆದ ಬಾರಿ ವಿನಾಶಕಾರಿ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿಗಳು, ಅಪಾಯಕಾರಿ ಸ್ಥಳಗಳಲ್ಲಿರುವ ಮನೆಗಳಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸುತ್ತಿದ್ದಾರೆ.

ಒಟ್ಟಾರೆ ಕಳೆದ ಬಾರಿಯ ವಿನಾಶಕಾರಿ ಪ್ರವಾಹ ಇನ್ನೂ ಹಸಿರಾಗಿರುವಾಗಲೇ ಉತ್ತರಾಖಂಡ ರಾಜ್ಯದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಜನರಲ್ಲಿ ಆಂತಕ ಉಂಟುಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement