ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಡಿಶುಂ ಡಿಶುಂ' ಚಿತ್ರದ ನಾಯಕಿ ತನ್ಮಯ ವಿರುದ್ಧ ದೂರು

'ಡಿಶುಂ ಡಿಶುಂ' ಚಿತ್ರದಲ್ಲಿ ನಟಿಸಲು ನಿರಾಕರಿಸಿದ ನಟಿ ತನ್ಮಯ ವಿರುದ್ದ ದೂರು ದಾಖಲಾಗಿದೆ.

Srinivasa Murthy VN
Updated On : 17 Jul 2014, 4:56 am

ಬೆಂಗಳೂರು: ಓಂ ಪ್ರಕಾಶ್ ನಾಯಕ್ ನಟಿಸಿ, ನಿರ್ದೇಶಿಸುತ್ತಿರುವ 'ಡಿಶುಂ ಡಿಶುಂ' ಚಿತ್ರದ ನಾಯಕಿ ತನ್ಮಯ ವಿರುದ್ದ ದೂರು ದಾಖಲಾಗಿದೆ.

ಚಿತ್ರದಲ್ಲಿ ನಟಿಸಲು ನಿರಾಕರಿಸಿದ ನಟಿಯ ವಿರುದ್ದ ನಟ, ನಿರ್ದೇಶಕ ಓಂಪ್ರಕಾಶ್ ನಾಯಕ್ ಅವರು ಚಲನಚಿತ್ರ ವಾಣೀಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ್, 'ಡಿಶುಂಡಿಶುಂ' ಚಿತ್ರದಲ್ಲಿ ಮೂವರು ನಾಯಕಿರಿದ್ದು ಈಗಾಗಲೇ ಇಬ್ಬರು ನಾಯಕಿಯರ ಚಿತ್ರೀಕರಣ ಮುಗಿದಿದೆ. ಮೂರನೇ ನಾಯಕಿಯಾಗಿ ತನ್ಮಯ ಅವರನ್ನು ಆಯ್ಕೆ ಮಾಡಿದ್ದು, ಜುಲೈ 16 ರಂದು ಶೂಟಿಂಗ್‌ಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಇದಕ್ಕೆ ತನ್ಮಯ ಸಹ ಒಪ್ಪಿಗೆ ನೀಡಿದ್ದರು. ಆದರೆ ಈಗ ಚಿತ್ರೀಕರಣಕ್ಕೆ ಬಾರದೇ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳುತ್ತಿರುವುದಾಗಿ ತಿಳಿಸಿದರು.

ಈ ಕುರಿತಂತೆ ತಾವು ಜುಲೈ 14ರ ಬೆಳಿಗ್ಗೆ ತನ್ಮಯ ಅವರೊಂದಿಗೆ ಮಾತನಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇದಾದ ಬಳಿಕ ಮಧ್ಯಾಹ್ನ 3ರ ಹೊತ್ತಿಗೆ ಸಂದೇಶ ರವಾನಿಸಿದ ನಟಿ, ತಾನು ಹುಬ್ಬಳ್ಳಿಯಲ್ಲಿ ಮತ್ತೊಂದು ಚಿತ್ರದ ಶೂಟಿಂಗ್‌ನಲ್ಲಿರುವುದರಿಂದ ನಿಮ್ಮ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಿಲ್ಲ ಎಂಬ ಬೇಜವಾಬ್ದಾರಿತನದ ಮಾತನ್ನಾಡಿದ್ದಾರೆ ಎಂದು ಓಂಪ್ರಕಾಶ್ ನಾಯಕ್ ದೂರಿದ್ದಾರೆ.

ಈಗ ಚಿತ್ರೀಕರಣ ಮುಂದೂಡಿದ ಪರಿಣಾಮ ನಮಗೆ 2 ಲಕ್ಷ ರುಪಾಯಿ ನಷ್ಟ ಸಂಭವಿಸಿದ್ದು, ಈ ನಷ್ಟವನ್ನು ನಟಿ ತನ್ಮಯ ಭರಿಸಿಕೊಡಬೇಕು ಹಾಗೂ ತಮ್ಮ ತಪ್ಪಿಗೆ ಕ್ಷಮೆಯಾಚಿಸಬೇಕು ಎಂದು ನಿರ್ದೇಶಕರು ಆಗ್ರಹಿಸಿದ್ದಾರೆ.

ನಾಯಕ್ ಅವರಿಂದ ಯಾವುದೇ ಅಡ್ವಾನ್ಸ್ ಪಡೆದಿರಲಿಲ್ಲ: ನಟಿ ತನ್ಮಯ

ಇದೇ ವೇಳೆ ನಿರ್ದೇಶಕ ಓಂ ಪ್ರಕಾಶ್ ನಾಯಕ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟಿ ತನ್ಮಯ ಅವರು, ತಾವು ಡಿಶುಂ ಡಿಶುಂ ಚಿತ್ರದಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದು ನಿಜ. ಆದರೆ ಈ ಬಗ್ಗೆ ಯಾವುದೇ ರೀತಿಯ ಲಿಖಿತ ಒಪ್ಪಂದ ಮಾಡಿಕೊಂಡಿರಲಿಲ್ಲ. ಅಲ್ಲದೆ ಓಂ ಪ್ರಕಾಶ್ ಅವರಿಂದ ಯಾವುದೇ ರೀತಿಯ ಅಡ್ವಾನ್ಸ್ ಕೂಡ ಪಡೆದಿರಲಿಲ್ಲ.

ಡಿಶುಂ ಡಿಶುಂ ಚಿತ್ರದ ಸಮಯದಲ್ಲಿಯೇ ಮತ್ತೊಂದು ಚಿತ್ರಕ್ಕೆ ಆಫರ್ ಬಂದಿತ್ತು. ಆ ಚಿತ್ರದ ನಿರ್ದೇಶಕರು ನನ್ನೊಂದಿಗೆ ಮಾತನಾಡಿ ಲಿಖಿತ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಎರಡೂ ಚಿತ್ರಗಳ ನಡುವೆ ದಿನಾಂಕ ಏರುಪೇರಾಯಿತು. ಹೀಗಾಗಿ ನಾನು ಡಿಶುಂ ಡಿಶುಂ ಚಿತ್ರದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಈ ಬಗ್ಗೆ ನಾನು ನಿರ್ದೇಶಕ ಓಂ ಪ್ರಕಾಶ್ ಅವರೊಂದಿಗೂ ಕೂಡ ಒಂದು ಸುತ್ತಿನ ಚರ್ಚೆ ನಡೆಸಿದ್ದೆ. ಅಲ್ಲದೆ ವಿವಾದ ಇತ್ಯರ್ಥ ಪಡಿಸಲು ಮುಂದಾಗಿದ್ದೆ. ಆದರೆ ಅಷ್ಟರಲ್ಲಿಯೇ ಅವರು ಮಾಧ್ಯಮಗಳ ಮುಂದೆ ಹೋಗಿದ್ದಾರೆ ಎಂದು ನಟಿ ತನ್ಮಯ ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement