ಮೈಕ್ರೋಸಾಫ್ಟ್‌ನ 6000 ನೌಕರರ ಉದ್ಯೋಗ ಕಡಿತ
ವಿಶ್ವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ಸುಮಾರು 6000 ನೌಕರರ..
ನ್ಯೂಯಾರ್ಕ್: ವಿಶ್ವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಎನಿಸಿಕೊಂಡಿರುವ ಮೈಕ್ರೋಸಾಫ್ಟ್ ಸಂಸ್ಥೆ ಸುಮಾರು 6000 ನೌಕರರ ಉದ್ಯೋಗ ಕಡಿತಗೊಳಿಸಿ ಮನೆಗೆ ಕಳುಹಿಸಲು ಮುಂದಾಗಿದೆ.
ಸಂಸ್ಥೆಯ ಇತಿಹಾಸದಲ್ಲಿಯೇ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಇದಾಗಿದ್ದು, ಸಂಸ್ಥೆಯು ನೂತನವಾಗಿ ತನ್ನದಾಗಿಸಿಕೊಂಡಿರುವ ನೋಕಿಯಾ ಸಂಸ್ಥೆಯ ಪುನಶ್ಚೇತನಕ್ಕೆ ಮತ್ತು ಸಂಸ್ಥೆಯ ಪುನರ್ ವಿನ್ಯಾಸಕ್ಕೆ ಮುಂದಾಗಿರುವುದರಿಂದ ಉದ್ಯೋಗ ಕಡಿತ ಅನಿವಾರ್ಯ ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಡೆಲ್ಲಾ ಅವರು ಹೇಳಿದ್ದಾರೆ.
ಇತ್ತೀಚೆಗೆ ಅವರು ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಉದ್ಯೋಗ ಕಡಿತ ಮತ್ತು ಸಂಸ್ಥೆಯ ಮುಂದಿನ ಕಠಿಣ ನಿರ್ಧಾರಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಪ್ರಸ್ತುತ ಉದ್ಯೋಗ ಕಳೆದುಕೊಳ್ಳುವವರ ಪೈಕಿ ಬಹುತೇಕರು ನೋಕಿಯಾ ಸಂಸ್ಥೆಯ ಮೂಲದವರೆಂದು ಹೇಳಲಾಗುತ್ತಿದೆ. ಭಾರತೀಯ ಮೂಲದ ಸತ್ಯಾ ನಡೆಲ್ಲಾ ಅವರು ಮೈಕ್ರೋಸಾಫ್ಟ್ ಸಂಸ್ಥೆಯ ಸಾರಥ್ಯ ವಹಿಸಿಕೊಂಡ ನಂತರ ತೆಗೆದುಕೊಂಡ ಸಂಸ್ಥೆಯ ಬಹುದೊಡ್ಡ ಉದ್ಯೋಗ ಕಡಿತ ನಿರ್ಧಾರ ಇದಾಗಿದೆ. ಮುಂದಿನ ಗುರುವಾರ ಈ ಬಗ್ಗೆ ಆಧಿಕೃತ ಹೇಳಿಕೆ ಹೊರಬೀಳಲಿದ್ದು, ನೌಕರರ ಕಡಿತ ಕುರಿತ ಸಂಪೂರ್ಣ ಮಾಹಿತಿ ದೊರೆಯುವ ಸಾಧ್ಯತೆ ಇದೆ.
ಇದಲ್ಲದೆ ತನ್ನ ಎಕ್ಸ್‌ಬಾಕ್ಸ್ ಗೇಮಿಂಗ್ ಘಟಕದಲ್ಲಿಯೂ ನೌಕರರ ಕಡಿತಕ್ಕೆ ಮೈಕ್ರೋಸಾಫ್ಟ್ ಸಂಸ್ಥೆ ಮುಂದಾಗಿದೆ. ಸಂಸ್ಥೆಯ ಈ ದಿಢೀರ್ ನಿರ್ಧಾರದಿಂದ ಸಾವಿರಾರು ನೌಕರರು ಇದೀಗ ಅತಂತ್ರ ಸ್ಥಿತಿಯಲ್ಲಿರುವಂತಾಗಿದೆ. ಈ ಹಿಂದೆ 2009ರಲ್ಲಿಯೂ ಮೈಕ್ರೋಸಾಫ್ಟ್ ಸಂಸ್ಥೆ ಸುಮಾರು 5,800 ನೌಕರರನ್ನು ಮನೆಗೆ ಕಳುಹಿಸಿತ್ತು.