ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶಿಕ್ಷಕನಿಂದಲೇ ಲೈಂಗಿಕ ಕಿರುಕುಳ: ತೀವ್ರಗೊಂಡ ಪೋಷಕರ ಪ್ರತಿಭಟನೆ

ವಿಬ್‌ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ತೀವ್ರಗೊಂಡಿದೆ.

Srinivasa Murthy VN
Updated On : 17 Jul 2014, 7:06 am

ಬೆಂಗಳೂರು: ಬೆಂಗಳೂರಿನ ಹೊರವಲಯದ ವಿಬ್‌ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ತೀವ್ರಗೊಂಡಿದೆ.

ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ವಿಬ್‌ಗಯಾರ್ ಶಾಲಾ ಆಡಳಿತ ಮಂಡಳಿ ಸದಸ್ಯರು ಭರವಸೆ ನೀಡಿದ ಹೊರತಾಗಿಯೂ ಆರೋಪಿ ಶಿಕ್ಷಕನನ್ನು ಪೊಲೀಸ್ ವಶಕ್ಕೆ ಒಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ನಿನ್ನೆಯಿಂದ ನಡೆಯುತ್ತಿದ್ದ ಪ್ರತಿಭಟನೆ ಗುರುವಾರ ಕೂಡ ಮುಂದುವರೆದಿದ್ದು, ಇಂದು ಬೆಳಗ್ಗಿನಿಂದಲೇ ಮಕ್ಕಳ ಪೋಷಕರು ಶಾಲಾ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಅಲ್ಲದೆ ಉದ್ರಿಕ್ತ ಗುಂಪೊಂದು ಶಾಲಾ ಆವರಣದಲ್ಲಿನ ಪೀಠೋಪಕರಣಗಳನ್ನು ಮತ್ತು ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಶಾಲಾ ಪ್ರಾಂಶುಪಾಲ ರುಸ್ತುಂ ಕೇರವಾಲಾ, ಅವರು ಘಟನೆ ಕುರಿತಂತೆ ಪೋಷಕರ ಕ್ಷಮೆ ಕೋರಿದರು. ಅಲ್ಲದೆ ಈ ಬಗ್ಗೆ ಪೊಷಕರೊಂದಿಗೆ ಚರ್ಚೆ ನಡೆಸಲು ಮುಂದಾದರು. ಅಲ್ಲದೆ ಘಟನಾ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಶಾಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಅಗತ್ಯ ದಾಖಲೆಗಳನ್ನು ನೀಡುತ್ತೇವೆ. ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಶಾಲಾ ಪ್ರಾಂಶುಪಾಲ ರುಸ್ತುಂ ಅವರ ಭರವಸೆಯ ಮೇಲೆ ಪೋಷಕರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಮ್ ತರಬೇತುದಾರ ಮತ್ತು ಓರ್ವ ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಪರಾಧಿಗಳ ವಿರುದ್ಧ ಕಠಿಣಕ್ರಮ: ನಂದೀಶ್ ರೆಡ್ಡಿ ಭರವಸೆ
ಇದೇ ವೇಳೆ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸ್ಥಳೀಯ ಮುಖಂಡ ನಂದೀಶ್ ರೆಡ್ಡಿ ಅವರು, ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಣವ್ ಮೊಹಾಂತಿ ಅವರು ಆರೋಪಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಲೈಂಗಿಕ ಕಿರುಕುಳ ಅಲ್ಲ, ಅತ್ಯಾಚಾರ..?
ಇದೇ ವೇಳೆ ಬಾಲಕಿ ಮೇಲೆ ನಡೆದಿರುವುದು ಲೈಂಗಿಕ ಕಿರುಕುಳ ಅಲ್ಲ. ಅತ್ಯಾಚಾರ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಗೆ ಕೆಟ್ಟ ಹೆಸರು ಬರುವುದರಿಂದ ಪ್ರಕರಣವನ್ನು ಶಾಲಾ ಆಡಳಿತ ಮಂಡಳಿ ಲೈಂಗಿಕ ಕಿರುಕುಳ ಎಂದು ತಿರುಚುತ್ತಿದೆ. ಅಲ್ಲದೆ ಶಿಕ್ಷಕನ ರಕ್ಷಣೆಗೆ ಮುಂದಾಗಿದೆ. ಬಾಲಕಿಯ ವೈದ್ಯಕೀಯ ವರದಿ ತಮಗೆ ದೊರೆತಿದ್ದು, ಅದು ಲೈಂಗಿಕ ಕಿರುಕುಳ ಅಲ್ಲ. ಆತ್ಯಾಚಾರ ಎಂದು ಪೋಷಕರು ಹೇಳಿದ್ದಾರೆ.

ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿದ ಲೈಂಗಿಕ ಕಿರುಕುಳ ಪ್ರಕರಣ
ಇದೇ ವೇಳೆ ಶಾಲಾ ಬಾಲಕಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಮತ್ತು ಫ್ರೇಜರ್‌ಟೌನ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳ ಕುರಿತಂತೆ ವಿಧಾನಸಭಾ ಕಲಾಪದಲ್ಲಿ ಖಂಡನೆ ವ್ಯಕ್ತವಾಯಿತು. ಪ್ರತಿಪಕ್ಷ ಬಿಜೆಪಿ ಸೇರಿದಂತೆ ಜೆಡಿಎಸ್ ಪಕ್ಷದ ಸದಸ್ಯರು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಗೃಹ ಸಚಿವ ಕೆಜೆ ಜಾರ್ಜ್ ಅವರು ತಮ್ಮ ವಾಣಿಜ್ಯ ವ್ಯವಹಾರದಲ್ಲಿಯೇ ತಲ್ಲೀನರಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಅವರು ತಲೆಕೆಡಿಸಿಕೊಂಡಂತೆ ಇಲ್ಲ ಎಂದು ಬಿಜೆಪಿ ಸದಸ್ಯರು ಜಾರ್ಜ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದರು. ಅಲ್ಲದೆ ಅತ್ಯಾಚಾರ ಪ್ರಕರಣಗಳನ್ನು ರಾಜ್ಯ ಸರ್ಕಾರ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಪ್ರತಿಪಕ್ಷ ಸದಸ್ಯರ ಈ ಮಾತುಗಳು ಸದನದಲ್ಲಿ ಗದ್ದಲಕ್ಕೆ ಕಾರಣವಾದವು. ಈ ವೇಳೆ ಪ್ರತಿಪಕ್ಷ ಸದಸ್ಯರು ಮತ್ತು ಆಡಳಿತ ಸದಸ್ಯರು ಪರಸ್ಪರ ಕೆಸರೆರಚಾಟಕ್ಕೆ ಮುಂದಾಗಿದ್ದರು.

ಕೊನೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಮಾತನಾಡಿದ ಗೃಹ ಸಚಿವ ಜಾರ್ಜ್ ಅವರು, ಬಿಜೆಪಿ ಸರ್ಕಾರದ ಸಮಯದಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಪ್ರಕರಣ ಸಂಬಂಧ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ಅತ್ಯಾಚಾರ ಪ್ರಕರಣಗಳಿಂದಾಗಿ ಸಿದ್ಧರಾಮಯ್ಯ ನೇತೃತ್ವತದ ಕಾಂಗ್ರೆಸ್ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement