ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಜನಸಂಖ್ಯೆಗೆ ಹೋಲಿಸಿದರೆ ಅಪರಾಧ ಪ್ರಮಾಣ ಕಡಿಮೆ': ಮುಲಾಯಂ

ಉ.ಪ್ರದೇಶದ ಜನಸಂಖ್ಯೆಗೆ ಹೊಲೀಸಿದರೆ ಅಪರಾಧ ಕೃತ್ಯ..

Srinivasa Murthy VN
Updated On : 18 Jul 2014, 4:43 am

ಲಖನೌ: ಉತ್ತರ ಪ್ರದೇಶ ರಾಜ್ಯದ ಜನಸಂಖ್ಯೆಗೆ ಹೊಲೀಸಿದರೆ ರಾಜ್ಯದಲ್ಲಿನ ಅಪರಾಧ ಕೃತ್ಯಗಳ ಪ್ರಮಾಣ ತೀರ ಕಡಿಮೆಯೇ ಇದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಹೇಳಿದ್ದಾರೆ.

ಲಖನೌನಲ್ಲಿನ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾಧ್ಯಮಗಳು ಮುಲಾಯಂ ಸಿಂಗ್ ಯಾದವ್ ಅವರನ್ನು ಪ್ರಶ್ನಿಸಿದಾಗ ಮಾತನಾಡಿದ ಅವರು, 'ರಾಜ್ಯದ ಜನಸಂಖ್ಯಾ ಪ್ರಮಾಣ 19 ಕೋಟಿಗೂ ಅಧಿಕವಾಗಿದ್ದು, ಇದಕ್ಕೆ ಹೋಲಿಕೆ ಮಾಡಿದರೆ ಅಪರಾಧ ಕೃತ್ಯಗಳ ಪ್ರಮಾಣ ತೀರ ಕಡಿಮೆಯೇ' ಎಂದು ತಮ್ಮ ಪುತ್ರ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬೆನ್ನಿಗೆ ನಿಂತಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದ್ದು, ಬದನೌ ಗ್ರಾಮದ ಯುವತಿಯ ಹತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಇತ್ತೀಚೆಗೆ ಲಖನೌನಲ್ಲಿ ವಿವಾಹಿತ ಮಹಿಳೆಯನ್ನು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ಗೈದು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಇದಲ್ಲದೆ ಸ್ಥಳೀಯ ಶಾಲೆಗೆ ನುಗ್ಗಿದ್ದ ದುಷ್ಕರ್ಮಿಗಳು ಶಾಲಾ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಮುಲಾಯಂ ಸಿಂಗ್ ಯಾದವ್ ಅವರು ನೀಡಿರುವ ಈ ಹೇಳಿಕೆ ಅಚ್ಚರಿ ಮೂಡಿಸಿದೆ.

ಅಖಿಲೇಶ್ ವಿರುದ್ಧ ತೀವ್ರಗೊಂಡ ಪ್ರತಿಭಟನೆ
ಇತ್ತ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಮತ್ತು ಸಮಾಜದ ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಲಖನೌನಲ್ಲಿರುವ ಉತ್ತರ ಪ್ರದೇಶ ಸಚಿವಾಲಯದ ಹೊರಗಡೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿವೆ.

ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ: ಅಖಿಲೇಶ್ ಭರವಸೆ
ಇದೇ ವೇಳೆ ಪ್ರತಿಭಟನಾಕಾರರ ಮನವೋಲಿಕೆಗೆ ಮುಂದಾದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ.

ಒಟ್ಟಾರೆ ಅತ್ಯಾಚಾರಿಗಳ ಸ್ವರ್ಗವಾಗಿ ಮಾರ್ಪಟ್ಟಿರುವ ಉತ್ತರ ಪ್ರದೇಶದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವುದು ಬಿಟ್ಟು, ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಪುತ್ರ ಅಖಿಲೇಶ್ ಯಾದವ್ ಅವರ ಬೆನ್ನಿಗೆ ನಿಂತಿದ್ದಾರೆ. ಇದೇ ಪರಿಸ್ಥಿತಿ ಕರ್ನಾಟಕದಲ್ಲಿಯೂ ಮುಂದುವರೆದಿದ್ದು, ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗುವ ಮೂಲಕ ತಮಗೂ, ಉತ್ತರ ಪ್ರದೇಶದ ರಾಜಕಾರಣಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ತೋರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement