ಮಲೇಷ್ಯಾ ವಿಮಾನ ದುರಂತ: ಬ್ಲಾಕ್ ಬಾಕ್ಸ್ ಪತ್ತೆ?
ಯುದ್ಧ ಪೀಡಿತ ಉಕ್ರೇನ್ನಲ್ಲಿ ದುರಂತಕ್ಕೀಡಾದ ಮಲೇಷ್ಯಾ ಏರ್ಲೈನ್ಸ್ ವಿಮಾನದ ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಗ್ರಬೋವ್: ಯುದ್ಧ ಪೀಡಿತ ಉಕ್ರೇನ್ನಲ್ಲಿ ದುರಂತಕ್ಕೀಡಾದ ಮಲೇಷ್ಯಾ ಏರ್ಲೈನ್ಸ್ ವಿಮಾನದ ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಶೋಧನಾ ತಂಡಕ್ಕೆ ಬ್ಲಾಕ್ಬಾಕ್ಲ್ ಸೇರಿದಂತೆ ವಿಮಾನದ ಇತರೆ ಪ್ರಮುಖ ಬಿಡಿ ಭಾಗಗಳು ದೊರೆತಿವೆ ಎಂದು ತಿಳಿದುಬಂದಿದೆ. ಸುಮಾರು 1 ಕಿ.ಮಿ ಪ್ರದೇಶದಲ್ಲಿ ಹರಡಿರುವ ವಿಮಾನದ ಅವಶೇಷಗಳನ್ನು ನುರಿತ ತಜ್ಞರು ಪರಿಶಿಲನೆ ಮಾಡುತ್ತಿದ್ದು, ವಿಮಾನ ದುರಂತಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ತಜ್ಞರು ತನಿಖೆ ನಡೆಸುತ್ತಿದ್ದಾರೆ.
ಪ್ರಸ್ತುತ ರಷ್ಯಾಪರ ಬಂಡುಕೋರರ ವಶದಲ್ಲಿರುವ ದುರಂತ ಸ್ಥಳದಲ್ಲಿ ತನಿಖಾಧಿಕಾರಿಗಳಿಗೆ ಮಾತ್ರ ಅನುವು ಮಾಡಿಕೊಡಲಾಗಿದ್ದು, ತನಿಖಾಧಿಕಾರಿಗಳು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತ ಮಲೇಷ್ಯಾ ವಿಮಾನ ದುರಂತ ವಿಚಾರ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ವಿಮಾನ ಪತನ ದುರಂತವೇ ಅಥವಾ ಬಂಡುಕೋರರು ಸಿಡಿಸಿದ ಕ್ಷಿಪಣಿಯಿಂದ ವಿಮಾನ ಪತನವಾಯಿತೇ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಇವಿಷ್ಟೇ ಅಲ್ಲದೆ ಮಲೇಷ್ಯಾದ ವಿಮಾನದ ಹಾರಾಟದ ದಿಕ್ಕು ಬದಲಾಗಿದೆ ಎಂಬ ವಾದವೂ ಕೂಡ ಕೇಳಿಬರುತ್ತಿದ್ದು, ಅಂತಾರಾಷ್ಟ್ರೀಯ ಗಮನ ಸೆಳೆಯಲು ವಿಮಾನ ಪತನಕ್ಕೆ ಉಗ್ರರು ಮೊದಲೇ ಉಪಾಯ ಮಾಡಿದ್ದರೇ..? ಎಂಬ ಶಂಕೆ ವ್ಯಕ್ತವಾಗುತ್ತಿದೆ. ಅಲ್ಲದೆ ನಿಗದಿತ ಹಾದಿಯನ್ನು ಬಿಟ್ಟು ಉಕ್ರೇನ್ನ ವಿವಾದಿತ ಯುದ್ಧಗ್ರಸ್ತ ಭೂಪ್ರದೇಶದ ಮೇಲೆ ಪೈಲಟ್ ಏಕೆ ವಿಮಾನವನ್ನು ಕೊಂಡೊಯ್ದ ಎಂಬ ಪ್ರಶ್ನೆಗೆ ತಜ್ಞರು ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.