ಮಲೇಷ್ಯಾ ವಿಮಾನ ದುರಂತ: ಅಜ್ಞಾತ ಸ್ಥಳಕ್ಕೆ ಶವಗಳ ಸಾಗಣೆ
ಕ್ಷಿಪಣಿ ದಾಳಿಯಿಂದ ದುರಂತಕ್ಕೀಡಾದ ಮಲೇಷ್ಯಾ ವಿಮಾನದಲ್ಲಿನ ಪ್ರಯಾಣಿಕರ ಶವಗಳನ್ನು ರಷ್ಯಾಪರ ಬಂಡುಕೋರರು ಅಜ್ಞಾತ ಸ್ಥಳಕ್ಕೆ ರವಾನಿಸಿದ್ದಾರೆ..
ಕೀವ್: ಕ್ಷಿಪಣಿ ದಾಳಿಯಿಂದ ದುರಂತಕ್ಕೀಡಾದ ಮಲೇಷ್ಯಾ ವಿಮಾನದಲ್ಲಿನ ಪ್ರಯಾಣಿಕರ ಶವಗಳನ್ನು ರಷ್ಯಾಪರ ಬಂಡುಕೋರರು ಅಜ್ಞಾತ ಸ್ಥಳಕ್ಕೆ ರವಾನಿಸಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.
ಬಂಡುಕೋರರು ಶವಗಳನ್ನು ಟ್ರಕ್ಗೆ ಸಾಗಿಸುತ್ತಿದ್ದ ದೃಶ್ಯವನ್ನು ಅಂತಾರಾಷ್ಟ್ರೀಯ ಪತ್ರಕರ್ತರು ಕಂಡಿದ್ದು, ಸುಮಾರು 196 ಶವಗಳನ್ನು ಬಂಡುಕೋರರು ಅಜ್ಞಾತ ಸ್ಥಳಕ್ಕೆ ರವಾನಿಸಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ. ಈ ಬಗ್ಗೆ ಮಾತನಾಡಿರುವ ಉಕ್ರೇನ್ ವಿದೇಶಾಂಗ ವಕ್ತಾರೆ ನತಾಲಿಯಾ ಬೈಸ್ಟ್ರೋ ಅವರು, ಘಟನಾ ಸ್ಥಳದಲ್ಲಿ ಕ್ಷಿಪ್ರ ಕಾರ್ಯಪಡೆಯ ಯೋಧರು ಕರ್ತವ್ಯನಿರತರಾಗಿದ್ದ ವೇಳೆ ರಷ್ಯಾಪರ ಬಂಡುಕೋರರು ಅಲ್ಲಿಗೆ ಆಗಮಿಸಿ ಶವಗಳನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಬಳಿಕ ಅಜ್ಞಾತ ಸ್ಥಳಕ್ಕೆ ಶವಗಳನ್ನು ಕೊಂಡೊಯ್ದಿದ್ದಾರೆ ಎಂದು ಹೇಳಿದರು.
ದುರಂತದ ಬಗ್ಗೆ ಅಮೆರಿಕ ತೀವ್ರ ಕಳವಳ: ಕೆರ್ರಿ
ಇದೇ ವೇಳೆ ಮಲೇಷ್ಯಾ ವಿಮಾನ ದುರಂತ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅಮೆರಿಕ ಈ ಬಗ್ಗೆ ರಷ್ಯಾದೊಂದಿಗೆ ಮಾತಕುತೆ ನಡೆಸಿದೆ. ಅಮೆರಿಕ ವಿದೇಶಾಂಗ ರಾಯಭಾರಿ ಜಾನ್ ಕೆರ್ರಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ದುರಂತ ಕುರಿತಂತೆ ಅಮೆರಿಕದ ಕಳವಳ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಉಕ್ರೇನ್ ವಿವಾದಿತ ಯುದ್ಧಗ್ರಸ್ಥ ಪ್ರದೇಶದಲ್ಲಿ ಕ್ಷಿಪಣಿ ದಾಳಿಯಿಂದ ಪ್ರಯಾಣಿಕ ವಿಮಾನವನ್ನು ಹೊಡೆದುರುಳಿಸಿದ ಘಟನೆಯಿಂದ ಅಂತಾರಾಷ್ಟ್ರೀಯ ಸಮುದಾಯ ದಿಗ್ಭ್ರಾಂತಗೊಂಡಿದ್ದು, ಘಟನೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಲೇಷ್ಯಾದ ಎಂಹೆಚ್ 370 ವಿಮಾನ ನಾಪತ್ತೆ ಪ್ರಕರಣ ನಿಗೂಢವಾಗಿರುವಂತೆಯೇ ಮತ್ತೊಂದು ವಿಮಾನ ಕ್ಷಿಪಣಿದಾಳಿಯಿಂದ ದುರಂತಕ್ಕೀಡಾಗಿರುವುದು ಮಲೇಷ್ಯಾ ರಾಷ್ಟ್ರಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.