ವಿಬ್ಗಯಾರ್ ಅತ್ಯಾಚಾರ ಪ್ರಕರಣ: ಓರ್ವನ ಬಂಧನ
ವಿಬ್ಗಯಾರ್ ಶಾಲಾ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೋರ್ವನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬೆಂಗಳೂರು: ವಿಬ್ಗಯಾರ್ ಶಾಲಾ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೋರ್ವನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ರಾಜ್ಯ ಮಾತ್ರವಲ್ಲದೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗಿದ್ದ ವಿಬ್ ಗಯಾರ್ ಶಾಲೆಯ ಆರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪೊಲೀಸರು ಓರ್ವ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುಸ್ತಾಫ್ ಎಂದು ಗುರುತಿಸಲಾಗಿದ್ದು, ಈತ ವಿಬ್ಗಯಾರ್ ಶಾಲೆಯಲ್ಲಿ ಸ್ಕೇಟಿಂಗ್ ಸಹಾಯಕ ಬೋಧಕನಾಗಿದ್ದ ಎಂದು ತಿಳಿದುಬಂದಿದೆ.
ಕಳೆದ ಜುಲೈ 2ರಂದು ಶಾಲೆಗೆ ಆಗಮಿಸಿದ್ದ ಬಾಲಕಿಯನ್ನು ಪುಸಲಾಯಿಸಿ, ಶಾಲೆಯ ನಿರ್ಜನ ಕೊಠಡಿಗೆ ಕರೆದೋಯ್ದು ಅತ್ಯಾಚಾರ ಮಾಡಲಾಗಿತ್ತು. ಘಟನೆ ಬಳಿಕ ಬಾಲಕಿ ಸಾಮಾನ್ಯವಾಗಿಯೇ ಶಾಲೆಗೆ ಬರುತ್ತಿದ್ದಳು. ಆದರೆ ದಿನಕಳೆದಂತೆ ಬಾಲಕಿಯ ಆರೋಗ್ಯದಲ್ಲಿ ಆಗುತ್ತಿದ್ದ ವ್ಯತ್ಯಯವನ್ನು ಗಮನಿಸಿದ ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆಗ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಬೆಳಕಿಗೆ ಬಂದಿದೆ.
ಕೂಡಲೇ ಬಾಲಕಿಯ ಪೋಷಕರು ಶಾಲೆಯ ವಿರುದ್ಧ ಜುಲೈ 14ರಂದು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿ ಮೇಲಿನ ದೌರ್ಜನ್ಯ ಪ್ರಕರಣ ತಡವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಶಾಲೆಯ ಮಕ್ಕಳ ಪೋಷಕರು ಶಾಲೆಯ ವಿರುದ್ಧ ತಿರುಗಿಬಿದ್ದಿದ್ದು, ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಪೊಲೀಸರನ್ನು ಆಗ್ರಹಿಸುತ್ತಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಅನುಮಾನ ಬಂದ ಏಳು ಮಂದಿ ಶಾಲಾ ಸಿಬ್ಬಂದಿಯನ್ನು ಬಾಲಕಿಯ ಮುಂದೆ ಪರೇಡ್ ಮಾಡಿಸಿದ್ದರು. ಆದರೆ ಆರೋಪಿಯನ್ನು ನಿಖರವಾಗಿ ಗುರುತಿಸುವಲ್ಲಿ ಬಾಲಕಿ ವಿಫಲವಾಗಿದ್ದಳು. ಹೀಗಾಗಿ ತನಿಖೆಗೆ ಮುಂದಾಗಿರುವ ಪೊಲೀಸರು ಪ್ರಸ್ತುತ ಮುಸ್ತಾಫ್ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಮುಸ್ತಾಫ್ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಆರೋಪಿಯ ಬಂಧನಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ವರ್ತೂರು ಪೊಲೀಸರು ಸಿಸಿಬಿ ಪೊಲೀಸರ ಸಹಾಯದೊಂದಿಗೆ ಮುಸ್ತಾಫ್ನನ್ನು ಇಂದು ಸಂಜೆ ಬಂಧಿಸಿದ್ದಾರೆ.