ಜನಾರ್ಧನ ರೆಡ್ಡಿಗಿಂತ ಡಿ.ಕೆ.ಶಿ ಭ್ರಷ್ಟ : ಎಸ್.ಆರ್.ಹಿರೇಮಠ್
ಇಂಧನ ಸಚಿವ ಡಿ.ಕೆ.ಶಿವಕುಮಾರ್ ನ್ಯಾಷನಲ್ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ ಗೃಹ ನಿರ್ಮಾಣ..
ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನ್ಯಾಷನಲ್ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಸುಮಾರು 3 ಲಕ್ಷ ಕೋಟಿಗೂ ಅಧಿಕ ಅಕ್ರಮ ನಡೆಸಿದ್ದಾರೆ ಎಂದು ಸಮಾಜಪರಿವರ್ತನಾ ಸಂಘದ ಅಧ್ಯಕ್ಷ ಎಸ್.ಆರ್.ಹಿರೇಮಠ್ ಆರೋಪಿಸಿದ್ದಾರೆ.
ಈ ಕುರಿತು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ್ ಅವರು, ಡಿ.ಕೆ.ಶಿ ಗಾಲಿ ಜನಾರ್ಧನ ರೆಡ್ಡಿಗಿಂತ ದೊಡ್ಡ ಭ್ರಷ್ಟರಾಗಿದ್ದು, ಎನ್.ಟಿ.ಐ ಗೃಹ ನಿರ್ಮಾಣದಲ್ಲಿ ಬರೋಬ್ಬರಿ 600 ಲಕ್ಷ ಕೋಟಿಗೂ ಹೆಚ್ಚು ಅಕ್ರಮ ನಡೆಸಿ ಹಗರಣದ ಮೂಲ ಕಾರಣರಾಗಿದ್ದಾರೆ. ಸರ್ಕಾರ ಈ ಕೂಡಲೇ ಸಚಿವ ಡಿ.ಕೆ.ಶಿವ ಕುಮಾರ್ ವಿರುದ್ದ ಕಠಿಣ ಕ್ರಮ ಕೈಗೊಂಡು, ಪ್ರಕರಣದ ಕುರಿತು ಸಿ.ಬಿ.ಐ ವಿಚಾರಣೆ ನಡೆಸಬೇಕು.
ಅಲ್ಲದೆ ಹಗರಣದ ಬಗ್ಗೆ ಈ ವರೆಗೂ ಕ್ರಮ ಕೈಗೊಳ್ಳದ ಸಚಿವ ಮಹದೇವ್ರನ್ನು ಸಚಿವ ಸಂಪುಟದಿಂದಲೇ ಕೈಬಿಟ್ಟು, ಹಗರಣದಲ್ಲಿ ಪಾಲ್ಗೊಂಡಿರುವ ಎಲ್ಲಾ ಅಧಿಕಾರಿಗಳ ವಿರುದ್ದವೂ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಆಗಸ್ಟ್ 5 ರಂದು 'ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ' ಎಂಬ ಚಳುವಳಿಯನ್ನು ಬಳ್ಳಾರಿಯಲ್ಲಿ ನಡೆಸಲಾಗುವುದು ಹೇಳಿದ್ದಾರೆ.