ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಿತ್ರ ನಟಿ ರಂಭಾ ವಿರುದ್ಧ 'ವರದಕ್ಷಿಣೆ ಕಿರುಕುಳ' ದೂರು

ನಟಿ ರಂಭಾ ಮತ್ತು ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದ್ದು..

Srinivasa Murthy VN
Updated On : 23 Jul 2014, 8:12 am

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಮತ್ತು ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದ್ದು, ರಂಭಾ ಅವರ ಸಹೋದರ ಶ್ರೀನಿವಾಸ್ ಅವರ ಪತ್ನಿ ಪಲ್ಲವಿ ದೂರು ದಾಖಲಿಸಿದ್ದಾರೆ.

ಶ್ರೀನಿವಾಸ್ ಅವರ ಪತ್ನಿ ಪಲ್ಲವಿ ಅವರು ತಮ್ಮ ಪತಿ ಶ್ರೀನಿವಾಸ್, ರಂಭಾ ಸೇರಿದಂತೆ ಅವರ ಮಾವ ವೆಂಕಟೇಶ್ವರ ರಾವ್ (ರಂಭಾ ಅವರ ತಂದೆ) ಮತ್ತು ಅವರ ಪತ್ನಿ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ. 'ತಮ್ಮ ಪತಿ ಶ್ರೀನಿವಾಸ್ ಅವರು ನಿತ್ಯ ಕುಡಿದು ಬಂದು ತಮ್ಮನ್ನು ದೈಹಿಕವಾಗಿ ಹಿಂಸಿಸುತ್ತಾರೆ. ಅಲ್ಲದೆ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಪೀಡಿಸುತ್ತಾರೆ' ಎಂದು ಆರೋಪಿಸಿ ಪಲ್ಲವಿ ಅವರು ಹೈದರಾಬಾದ್‌ನ ನಾಂಪಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ನ್ಯಾಯಾಲಯ ಪ್ರಕರಣದ ಕುರಿತು ಇಂದು ವಿಚಾರಣೆ ನಡೆಸಿ, ವರದಕ್ಷಿಣೆ ಕಿರುಕುಳ ದೂರು ದಾಖಲಸಿಕೊಂಡು ವಿಚಾರಣೆ ನಡೆಸುವಂತೆ ಬಂಜಾರಾ ಹಿಲ್ಸ್ ಪೊಲೀಸರಿಗೆ ಸೂಚಿಸಿದೆ. ಪ್ರಸ್ತುತ ರಂಭಾ ಮತ್ತು ಅವರ ಕುಟುಂಬದ ವಿರುದ್ಧ ಐಪಿಸಿ ಸೆಕ್ಷನ್ 498 (ಎ) (ವರದಕ್ಷಿಣೆಗಾಗಿ ಕಿರುಕುಳ) ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಬಂಜಾರಾ ಹಿಲ್ಸ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಂಭಾ ದಕ್ಷಿಣ ಭಾರತದ ಖ್ಯಾತ ನಟಿಯಾಗಿದ್ದು, ಅವರ ಸಹೋದರ ಶ್ರೀನಿವಾಸ್ ಅವರು ಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ರಂಭಾ ಮತ್ತು ಅವರ ಕುಟುಂಬ ಚೆನ್ನೈನಲ್ಲಿ ವಾಸವಾಗಿದ್ದು, ರಂಭಾ ಸಹೋದರ ಶ್ರೀನಿವಾಸ್ ಅವರ ಪತ್ನಿ ಪಲ್ಲವಿ ಹೈದರಾಬಾದ್ ಮೂಲದವರೆಂದು ತಿಳಿದುಬಂದಿದೆ.

ಹೀಗಾಗಿ ಪ್ರಕರಣವನ್ನು ತಾವೇ ತನಿಖೆ ನಡೆಸಬೇಕೋ ಅಥವಾ ಚೆನ್ನೈ ಪೊಲೀಸರಿಗೆ ವರ್ಗಾಯಿಸಬೇಕೋ ಎಂದು ಬಂಜಾರಾ ಹಿಲ್ಸ್ ಪೊಲೀಸರು ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement