ತೈವಾನ್‌ನಲ್ಲಿ ವಿಮಾನ ಅಪಘಾತ: 51 ಸಾವು, 4 ಮಂದಿಗೆ ಗಾಯ
ತೈವಾನ್‌ನಲ್ಲಿ ಪ್ರಯಾಣಿಕ ವಿಮಾನವೊಂದು ಲ್ಯಾಂಡಿಂಗ್ ವೇಳೆ ಸ್ಫೋಟಗೊಂಡಿದ್ದು, ದುರಂತದಲ್ಲಿ ಕನಿಷ್ಟ 51 ಮಂದಿ ಮೃತಪಟ್ಟಿದ್ದಾರೆ.
ತೈಪೈ: ತೈವಾನ್‌ನಲ್ಲಿ ಪ್ರಯಾಣಿಕ ವಿಮಾನವೊಂದು ಲ್ಯಾಂಡಿಂಗ್ ವೇಳೆ ಸ್ಫೋಟಗೊಂಡಿದ್ದು, ದುರಂತದಲ್ಲಿ ಕನಿಷ್ಟ 51 ಮಂದಿ ಮೃತಪಟ್ಟಿದ್ದಾರೆ.
ತೈವಾನ್‌ನ ಟ್ರಾನ್ಸ್ ಏಷ್ಯಾ ಏರ್‌ಲೈನ್ಸ್‌ಗೆ ಸೇರಿದ ಪ್ರಯಾಣಿಕ ವಿಮಾನ ದುರಂತಕ್ಕೀಡಾಗಿದ್ದು, ವಿಮಾನ ದುರಂತಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎನ್ನಲಾಗುತ್ತಿದೆ. ವಿಮಾನವು ಕೌಶಿಂಗ್‌ನಿಂದ ಪೆಂಘುವಿಗೆ ತೆರಳುತಿತ್ತು ಎಂದು ತಿಳಿದುಬಂದಿದೆ. ನಿನ್ನೆ ತೈವಾನ್ ರಾಜಧಾನಿ ತೈಪೈನಲ್ಲಿ ಸುಂಟರಗಾಳಿ ಸಹಿತ ಭಾರಿ ಸುರಿದಿದ್ದು, ವಾತಾವರಣ ಹದಗೆಟ್ಟಿತ್ತು. ಅಲ್ಲದೆ ಇಂದು ಸಂಜೆ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೆ ಇದರ ಹೊರತಾಗಿಯೂ ಈ ವಿಮಾನ ಯಾನ ಸಂಸ್ಥೆ ಪ್ರಯಾಣಕ್ಕೆ ಮುಂದಾಗಿತ್ತು.
ಆದರೆ ಕೊನೇ ಕ್ಷಣದಲ್ಲಿ ವಿಮಾನ ಗೋಪುರದಿಂದ ಬಂದ ತುರ್ತು ಮಾಹಿತಿಯ ಹಿನ್ನಲೆಯಲ್ಲಿ ವಿಮಾನದ ಪೈಲಟ್ ತುರ್ತು ಭೂಸ್ಪರ್ಶಕ್ಕೆ ಮುಂದಾಗಿದ್ದ. ಮೊದಲನೇ ಬಾರಿ ಲ್ಯಾಂಡಿಂಗ್ ಅಸಾಧ್ಯವಾದಾಗ ವಿಮಾನವನ್ನು ಪೈಲೆಟ್ ಆಗಸದತ್ತ ಕೊಂಡೊಯ್ದ. ಎರಡನೇ ಬಾರಿಯ ಲ್ಯಾಂಡಿಂಗ್ ವೇಳೆ ವಿಮಾನ ಸ್ಫೋಟಗೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಮಾನಯಾನ ಸಂಸ್ಥೆ ಮೂಲಗಳು ತಿಳಿಸಿರುವಂತೆ ವಿಮಾನದಲ್ಲಿ 54 ಪ್ರಯಾಣಿಕರು ಮತ್ತು 4 ಮಂದಿ ವಿಮಾನದ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.