ಯುಪಿಎಸ್‌ಸಿ: ಅಭ್ಯರ್ಥಿಗಳಿಂದ ರಾಜಧಾನಿಯಲ್ಲಿ ಪ್ರತಿಭಟನೆ
ಯುಪಿಎಸ್‌ಸಿ ನೂತನ ಪರೀಕ್ಷಾ ಕ್ರಮವನ್ನು ವಿರೋಧಿಸಿ ಅಭ್ಯರ್ಥಿಗಳು ನವದೆಹಲಿಯ ಪಾರ್ಲಿಮೆಂಟ್ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನವದೆಹಲಿ: ಕೇಂದ್ರ ನಾಗರಿಕ ಸೇವಾ ಆಯೋಗದ ನೂತನ ಪರೀಕ್ಷಾ ಕ್ರಮವನ್ನು ವಿರೋಧಿಸಿ ಅಭ್ಯರ್ಥಿಗಳು ನವದೆಹಲಿಯ ಪಾರ್ಲಿಮೆಂಟ್ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಯುಪಿಎಸ್‌ಯ ನೂತನ ಪರೀಕ್ಷಾ ಕ್ರಮದಿಂದ ಇಂಗ್ಲೀಷ್ ಭಾಷೆಯಲ್ಲಿ ಪ್ರಾವಿಣ್ಯರಲ್ಲದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಈ ನೂತನ ಪರೀಕ್ಷಾ ಕ್ರಮವನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಅಭ್ಯರ್ಥಿಗಳ ಪ್ರತಿಭಟನೆಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಸಾಥ್ ನೀಡಿವೆ. ಪ್ರತಿಭಟನಾಕಾರರು ಪಾರ್ಲಿಮೆಂಟ್ ಒಳಪ್ರವೇಶಿಸಲು ಪ್ರಯತ್ನಿಸಿದ್ದು, ಪೊಲೀಸರು ಅವರನ್ನು ತಡೆಯಲು ಹರಸಾಹಸಪಡುತ್ತಿದ್ದಾರೆ.
ಅಲ್ಲದೆ ಉದ್ರಿಕ್ತ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಘು ಲಾಠಿಪ್ರಹಾರ ಮತ್ತು ಜಲಫಿರಂಗಿಯನ್ನು ಬಳಸಿದ್ದಾರೆ. ಅಲ್ಲದೆ ಪಾರ್ಲಿಮೆಂಟ್ ಭವನದ ಪೊಲೀಸರು ಪ್ರತಿಭಟನೆಯಲ್ಲಿ ತೊಡಗಿದ್ದ ಸುಮಾರು 150 ಪ್ರತಿಭಟನಾಕಾರರನ್ನು ಬಂಧಿಸಿದ್ದು, 20 ಮಂದಿಯ ವಿರುದ್ಧ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿದ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪ್ರತಿಭಟನೆಯ ವೇಳೆ ನೂಕು ನುಗ್ಗಲು ಸಂಭವಿಸಿದ್ದು, 14 ಮಂದಿ ಅಭ್ಯರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪಾರ್ಲಿಮೆಂಟ್ ಭವನ ಮತ್ತು ಉದ್ಯೋಗಭವನದ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು ಮಧ್ಯಾಹ್ನ 12.30ಕ್ಕೆ ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಈ ಎರಡು ನಿಲ್ದಾಣಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ತಮ್ಮ ಪ್ರತಿಭಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರತಿಭಟನಾಕಾರರು, 'ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯರಲ್ಲದ ಅಭ್ಯರ್ಥಿಗಳ ಪಾಲಿಗೆ ನೂತನ ಪರೀಕ್ಷಾ ಕ್ರಮ ಮಾರಕವಾಗಿದ್ದು, ಈ ಬಗ್ಗೆ ಸಂಸತ್ ಭವನದಲ್ಲಿ ನಮ್ಮ ಪರವಾಗಿ ಸಂಸದರು ಮಾತನಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಪ್ರಸಕ್ತ ಪರೀಕ್ಷಾ ಕ್ರಮವನ್ನು ಹಿಂಪಡೆಯುವ ಕುರಿತು ಕೇಂದ್ರ ಸರ್ಕಾರ ನಮಗೆ ಆಶ್ವಾಸನೆ ನೀಡದ ಹೊರತು ನಾವು ನಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ' ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.