'ಪ್ರತಿಪಕ್ಷ' ಸ್ಥಾನ ಹೇಳಿಕೆ: ರೋಹಟಗಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ಪ್ರತಿಪಕ್ಷ ಸ್ಥಾನ ಕುರಿತು ಹೇಳಿಕೆ ನೀಡಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ನವದೆಹಲಿ: ಪ್ರತಿಪಕ್ಷ ಸ್ಥಾನ ಕುರಿತು ಹೇಳಿಕೆ ನೀಡಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಕಾಂಗ್ರೆಸ್ ಪಕ್ಷಕ್ಕೆ ಪ್ರತಿಪಕ್ಷ ಸ್ಥಾನ ನೀಡುವ ಕುರಿತು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಈ ಹಿಂದೆ ವರದಿ ನೀಡಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಹಟಗಿ ಅವರ ಹೇಳಿಕೆ ಬಿಜೆಪಿ ರಾಜಕೀಯ ಮುಖಂಡರನ್ನು ಓಲೈಸುವ ತಂತ್ರವಾಗಿದ್ದು, ಅವರ ಹೇಳಿಕೆಯಿಂದ ತಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಅವರು, ಅಟಾರ್ನಿ ಜನರಲ್ ಅವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಬಿಜೆಪಿ ರಾಜಕೀಯ ನಾಯಕರನ್ನು ಓಲೈಸಿಕೊಳ್ಳಲು ಅವರು ಇಂತಹ ಹೇಳಿಕೆ ನೀಡಿದ್ದಾರೆ. ಆಡಳಿತಾರೂಢ ಬಿಜೆಪಿ ಪ್ರತಿಪಕ್ಷ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡದಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತಮಗೆ ಪ್ರತಿಪಕ್ಷ ಸ್ಥಾನ ನೀಡದಿದ್ದರೆ ತಾವು ನ್ಯಾಯಾಲಯದ ಮೆಟ್ಟಿಲೇರುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಪ್ರತಿಪಕ್ಷ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ವರದಿ ನೀಡಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು, ಕಾಂಗ್ರೆಸ್ ಪಕ್ಷಕ್ಕೆ ಪ್ರತಿಪಕ್ಷ ಸ್ಥಾನಮಾನ ಪಡೆಯುವ ಅರ್ಹತೆ ಇಲ್ಲ. ನಿಯಮಾವಳಿಗಳ ಪ್ರಕಾರ ಪಕ್ಷವೊಂದು ಪ್ರತಿಪಕ್ಷ ಸ್ಥಾನಮಾನ ಪಡೆಯಲು ಸಂಸತ್ತಿನ ಒಟ್ಟು ಸದಸ್ಯ ಬಲದ ಶೇ.10ರಷ್ಟು ಸ್ಥಾನಗಳನ್ನು ಹೊಂದಿರಬೇಕು. ಕಳೆದ 60 ವರ್ಷಗಳಿಂದ ಇದೇ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ ಪ್ರತಿಪಕ್ಷ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರುವ ಕಾಂಗ್ರೆಸ್ ಪಕ್ಷ, ಕೇವಲ 44 ಸ್ಥಾನಗಳನ್ನು ಮಾತ್ರ ಹೊಂದಿದೆ. ಪ್ರತಿಪಕ್ಷ ಸ್ಥಾನ ಪಡೆಯಲು 55 ಸ್ಥಾನಗಳನ್ನು ಪಡೆದಿರಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಪ್ರತಿಪಕ್ಷ ಸ್ಥಾನಕ್ಕಾಗಿ 'ಕೈ'ಯಿಂದ ಸಹಿ ಸಂಗ್ರಹ
ಇದೇ ವೇಳೆ ಪ್ರತಿಪಕ್ಷ ಸ್ಥಾನ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಪಕ್ಷ ಸ್ಥಾನ ನೀಡುವ ಕುರಿತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸೂಕ್ತ ನಿರ್ಧಾರ ಕೈಗೊಳ್ಳಲ್ಲಿದ್ದಾರೆ ಎಂದು ಹೇಳಿದೆ. ಇದಕ್ಕೂ ಮೊದಲು ಪ್ರತಿಪಕ್ಷ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಇದಕ್ಕಾಗಿ ತನ್ನ ಮೈತ್ರಿ ಪಕ್ಷಗಳ ಸಂಸದರ ಸಹಿ ಸಂಗ್ರಹ ಮಾಡಿದ್ದು, ಸಂಸದರ ಸಹಿಗಳಿರುವ ಪತ್ರವನ್ನು ಸ್ಪೀಕರ್ ಅವರಿಗೆ ರವಾನಿಸಿದೆ. ಆ ಮೂಲಕ ತಮಗೆ ಪ್ರತಿಪಕ್ಷ ಸ್ಥಾನವನ್ನು ನೀಡಲೇಬೇಕು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಮೇಲೆ ಒತ್ತಡ ಹೇರಿದೆ.