ಬೆಳಗಾವಿಯಲ್ಲಿ ಮುಂದುವರೆದ 'ಎಂಇಎಸ್' ಪುಂಡಾಟಿಕೆ
ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಮುಂದುವರೆದಿದ್ದು, ಜಿಲ್ಲಾಡಳಿತ ತೆರವುಗೊಳಿಸಿದ್ದ ನಾಮಫಲಕದ ಸ್ಥಳದಲ್ಲಿ ಹೊಸ ನಾಮಫಲಕವನ್ನು ಪ್ರತಿಷ್ಟಾಪಿಸಿದ್ದಾರೆ.
ಬೆಳಗಾವಿ: ಬೆಳಗಾವಿ ನಗರದಲ್ಲಿ ಮಹಾರಾಷ್ಟ್ರಾ ಏಕೀಕರಣ ಸಮಿತಿ (ಎಂಇಎಸ್) ಪುಂಡಾಟಿಕೆ ಮುಂದುವರೆದಿದ್ದು, ಜಿಲ್ಲಾಡಳಿತ ತೆರವುಗೊಳಿಸಿದ್ದ ನಾಮಫಲಕ ಸ್ಥಳದಲ್ಲಿ ಹೊಸ ನಾಮಫಲಕವನ್ನು ಪ್ರತಿಷ್ಟಾಪಿಸಲಾಗಿದೆ.
ನ್ಯಾಯಾಲಯದ ಆದೇಶದ ಮೇರೆಗೆ ನಿನ್ನೆ ಬೆಳಗಾವಿ ನಗರದ ಎಳ್ಳೂರು ಗ್ರಾಮದಲ್ಲಿದ್ದ ಮಹಾರಾಷ್ಟ್ರ ನಾಮಫಲಕವನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು. ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ್ದ ಎಂಇಎಸ್ ಕಾರ್ಯಕರ್ತರು, ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳತ್ತ ಕಲ್ಲು ತೂರಾಟ ನಡೆಸಿದ್ದಲ್ಲದೆ ಬಸ್‌ಗಳನ್ನು ಜಖಂಗೊಳಿಸಿದ್ದರು.
ಅಲ್ಲದೆ ಇಂದು ಕೂಡ ಅವರ ಗೂಂಡಾವರ್ತನೆ ಮುಂದುವರೆದಿದ್ದು, ನಿನ್ನೆ ಜಿಲ್ಲಾಡಳಿತ ತೆರವುಗೊಳಿಸಿದ್ದ ನಾಮಫಲಕದ ಜಾಗದಲ್ಲೇ ಮಹಾರಾಷ್ಟ್ರ ರಾಜ್ಯದ ನಾಮಫಲಕವನ್ನು ಪ್ರತಿಷ್ಟಾಪಿಸಿದ್ದಾರೆ. ಇದರ ವರದಿಗಾಗಿ ತೆರಳಿದ್ದ ಕರ್ನಾಟಕದ ಪತ್ರಕರ್ತರನ್ನು ಮತ್ತು ಸ್ಥಳಕ್ಕಾಗಮಿಸಿದ್ದ ಪೊಲೀಸರತ್ತ ಎಂಇಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಅಂತೆಯೇ ವರದಿಗಾಗಿ ತೆರಳಿದ್ದ ಕರ್ನಾಟಕದ ಪತ್ರಕರ್ತರನ್ನು ರಸ್ತೆಯಲ್ಲಿಯೇ ಕಾರ್ಯಕರ್ತರು ಅಟ್ಟಾಡಿಸಿಕೊಂಡು ಬಂದಿದ್ದು, ಅವರ ಈ ಕೃತ್ಯಕ್ಕೆ ಸ್ಥಳೀಯ ಎಳ್ಳೂರು ಗ್ರಾಮಸ್ಥರು ಸಾಥ್ ನೀಡಿದ್ದಾರೆ. ಅಲ್ಲದೆ ಅವರು ಕರ್ನಾಟಕ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಇದು ಸಾಲದು ಎಂಬಂತೆ ಎಳ್ಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿದ್ದಾರೆ. ರಸ್ತೆಗಳಲ್ಲಿ ಕಲ್ಲುಗಳನ್ನು, ಮುಳ್ಳಿನ ಪೊದೆಗಳನ್ನು ಹಾಕುವ ಮೂಲಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆಯ ವಿರುದ್ಧ ಇದೀಗ ರಾಜ್ಯಾದ್ಯಂತ ಆಕ್ರೋಶ ಸ್ಪೋಟಗೊಂಡಿದ್ದು, ಬೆಂಗಳೂರು, ಮೈಸೂರು, ಧಾರವಾಡ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ ಎಂಇಎಸ್ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿವೆ.