ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿಬ್‌ಗಯಾರ್ ಪ್ರಕರಣ: ಶಾಲೆಗಳಿಗೆ ಆಯುಕ್ತರ ಹೊಸ ಗೈಡ್‌ಲೈನ್ಸ್

ಶಾಲಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು, ಶಾಲೆಗಳಿಗೆ ನೂತನ ಮಾರ್ಗಸೂಚಿಗಳನ್ನು ನೀಡಿದ್ದಾರೆ.

Srinivasa Murthy VN
Updated On : 26 Jul 2014, 7:49 am

ಬೆಂಗಳೂರು: ಶಾಲಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು, ಶಾಲೆಗಳಿಗೆ ನೂತನ ಮಾರ್ಗಸೂಚಿಗಳನ್ನು ನೀಡಿದ್ದಾರೆ.

ಇಂದು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ.ಎನ್.ರೆಡ್ಡಿ ಅವರು, ಬೆಂಗಳೂರಿನ ಎಲ್ಲ ಶಾಲೆಗಳಿಗೆ ಮತ್ತು ಪೋಷಕರಿಗೆ ಹೊಸ ಮಾರ್ಗಸೂಚಿಗಳನ್ನು ಜಾರಿಮಾಡಿದ್ದಾರೆ. ಕರ್ನಾಟಕ ಪೊಲೀಸ್ ಕಾಯ್ದೆಯ ಅನ್ವಯ ಆಯುಕ್ತರು 11 ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದಾರೆ.

ಎಂ.ಎನ್ ರೆಡ್ಡಿ ಅವರು ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿನ ಅಂಶಗಳು ಇಲ್ಲಿವೆ.

ಜಿಪಿಎಸ್ ಮತ್ತು ಸಿಸಿಟಿವಿ ಕಡ್ಡಾಯ
ಬೆಂಗಳೂರಿನಲ್ಲಿರುವ ಎಲ್ಲ ಶಾಲೆಗಳು ಮಕ್ಕಳನ್ನು ಕರೆತರುವ ವಾಹನಗಳಿಗೆ ಜಿಪಿಎಸ್ ತಂತ್ರಜ್ಞಾನವನ್ನು ಮತ್ತು ಸಿಸಿಟಿವಿ ಅಳವಡಿಸಿಕೊಳ್ಳಬೇಕು.

ವಿಚಕ್ಷಣಾಧಿಕಾರಿ ನೇಮಕ
ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಚಟುವಟಿಕೆಗಳನ್ನು ನಿರಂತರವಾಗಿ ವೀಕ್ಷಣೆ ಮಾಡಲು ಎಲ್ಲ ಶಾಲೆಗಳು ಕಡ್ಡಾಯವಾಗಿ ವಿಚಕ್ಷಣಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು.

ಗುರುತಿನ ಚೀಟಿ ಕಡ್ಡಾಯ
ಮಕ್ಕಳನ್ನು ಶಾಲೆಗೆ ಪೋಷಕರೇ ಬಿಡಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಬೇರೆಯವರೊಂದಿಗೆ ತಮ್ಮ ಮಕ್ಕಳನ್ನು ಕಳುಹಿಸಿದರೆ ಆವ್ಯಕ್ತಿ ಶಾಲೆಗೆ ತನ್ನ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಅಲ್ಲದೆ ಮಕ್ಕಳ ಪೋಷಕರಿಗೆ ಶಾಲೆಯೇ ಒಂದು ಗುರಿತಿನ ಚೀಟಿ ನೀಡಬೇಕು. ಆ ಪೋಷಕರೇ ನಿತ್ಯ ಗುರುತಿನ ಚೀಟಿಯನ್ನು ತೋರಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಬೇಕು.

ಅನ್ಯರಿಗೆ ನಿರ್ಬಂಧ
ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವಾಗ ಅಥವಾ ಇನ್ನಿತರೇ ಯಾವುದೇ ತರಬೇತಿ ನೀಡುವಾಗ ಆಯಾ ವಿಷಯದ ಶಿಕ್ಷಕನನ್ನು ಹೊರತುಪಡಿಸಿ ಉಳಿದವರು (ಮಕ್ಕಳನ್ನು ಹೊರತುಪಡಿಸಿ) ತರಗತಿಯಲ್ಲಾಗಲಿ ಅಥವಾ ತರಬೇತಿ ಜಾಗದಲ್ಲಾಗಲಿ ಇರಬಾರದು.

ಚಾಲಕರು ವಿದ್ಯಾರ್ಥಿಗಳೊಂದಿಗೆ ಬೆರೆಯಬಾರದು
ಮಕ್ಕಳನ್ನು ಕರೆತರುವ ಮತ್ತು ಮನೆಗೆ ಕರೆದೊಯ್ಯುವ ಶಾಲಾ ವಾಹನದ ಚಾಲಕರು ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆಯಬಾರದು. ಅಲ್ಲದೆ ಮಕ್ಕಳೊಂದಿಗೆ ಸಾಕಷ್ಚು ಅಂತರವನ್ನು ಕಾಯ್ದುಕೊಳ್ಳಬೇಕು.

ಶಿಕ್ಷಕರಿಂದ ಪೋಷಕರಿಗೆ ಎಸ್‌ಎಂಎಸ್
ಶಾಲೆಗೆ ಅಥವಾ ಮಗುವಿಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ವಿಚಾರವನ್ನು ಅಗ್ಗಿಂದ್ದಾಗ್ಗೆ ಶಿಕ್ಷಕರು ಎಸ್‌ಎಂಎಸ್ ಮೂಲಕ ಪೋಷಕರಿಗೆ ತಿಳಿಸಬೇಕು.

ಆಗಸ್ಟ್ 31ರ ಗಡುವು
ಮೇಲೆ ಹೇಳಿದ ಎಲ್ಲ ಅಂಶಗಳನ್ನು ಅಳವಡಿಸಿಕೊಳ್ಳಲು ಶಾಲೆಗಳಿಗೆ ಇದೇ ಆಗಸ್ಟ್ 31ರವರೆಗೆ ಗಡುವು ನೀಡಲಾಗಿದ್ದು, 31ರ ಬಳಿಕವೂ ಈ ನಿಯಮಗಳನ್ನು ಅಳವಡಿಸಿಕೊಳ್ಳದ ಶಾಲೆಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಒಟ್ಟಾರೆ ವಿಬ್ ಗಯಾರ್ ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಬೆಂಗಳೂರುನಗರ ಪೊಲೀಸರು, ಮಕ್ಕಳ ರಕ್ಷಣೆಗಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಪೊಲೀಸರ ಈ ಆರಂಭಿಕ ಶೂರತ್ವ ಆಗಸ್ಟ್ 31ರ ಬಳಿಕವೂ ಮುಂದುವರೆಯುತ್ತದೆಯೇ ಎಂಬುದು ಸಾರ್ವಜನಿಕವಲಯದಿಂದ ತೂರಿಬರುತ್ತಿರುವ ಪ್ರಶ್ನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement