ಅಪ್ರಾಪ್ತೆಯನ್ನು ವರಿಸಲಿರುವ ಮಾಜಿ ಕ್ರಿಕೆಟಿಗ ಅಖ್ತರ್..!
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, 17 ವರ್ಷದ ಬಾಲಕಿಯನ್ನು ಮದುವೆಯಾಗಲಿದ್ದಾರೆ ಎಂದು ಖ್ಯಾತ ಪತ್ರಿಕೆಯೊಂದು ವರದಿ ಮಾಡಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, 17 ವರ್ಷದ ಬಾಲಕಿಯನ್ನು ಮದುವೆಯಾಗಲಿದ್ದಾರೆ ಎಂದು ಖ್ಯಾತ ಪತ್ರಿಕೆಯೊಂದು ವರದಿ ಮಾಡಿದೆ.
39 ವರ್ಷದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ತಮ್ಮ ದೂರದ ಸಂಬಂಧಿಯೊಬ್ಬರ 17 ವರ್ಷದ ರುಬಾಬ್ ಎಂಬ ಬಾಲಕಿಯನ್ನು ಮದುವೆಯಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಖ್ಯಾತ ದೈನಿಕವೊಂದು ವರದಿ ಮಾಡಿದೆ. ಮದುವೆಗೆ ಸಂಬಂಧಿಸಿದಂತೆ ಈಗಾಗಲೇ ಉಭಯ ಕುಟುಂಬಗಳ ನಡುವೆ ಎಲ್ಲ ರೀತಿಯ ಮಾತುಕತೆ ಮುಕ್ತಾಯವಾಗಿದ್ದು, 'ನಿಖಾ' ದಿನಾಂಕ ಕೂಡ ನಿಗದಿಯಾಗಿದೆ ಎಂದು ತಿಳಿದುಬಂದಿದೆ.
ಇದೇ ಜೂನ್ 12ಕ್ಕೆ ಅಖ್ತರ್ ತಮ್ಮ ತವರು ಜಿಲ್ಲೆ ರಾವಲ್ಪಿಂಡಿಗೆ ಆಗಮಿಸಲಿದ್ದು, ಜೂನ್ 3ನೇ ವಾರದಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಜೂನ್ 19ರಂದು ಮೆಹಂದಿ ಕಾರ್ಯಕ್ರಮ, ಜೂನ್ 20ರಂದು ರುಖ್ಸಾತಿ ಕಾರ್ಯಕ್ರಮ ಮತ್ತು ರಾವಲ್ಪಿಂಡಿಯ ಹರಿಪುರದಲ್ಲಿರುವ ಬಿಲಾವಲ್ ಹಾಲ್ನಲ್ಲಿ ಜೂನ್ 22ರಂದು ವಲೀಮಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಹರಿಪುರದಲ್ಲಿ ವಾಸವಾಗಿರುವ ಉದ್ಯಮಿ ಮುಷ್ತಾಖ್ ಖಾನ್ ಅವರು ಹಜ್ ಯಾತ್ರೆಗೆ ತೆರಳಿದ್ದ ವೇಳೆ ಅಖ್ತರ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪರಸ್ಪರ ಮದುವೆ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಪತ್ರಿಕೆ ಹೇಳಿದೆ.
ಒಟ್ಟಾರೆ 39 ವರ್ಷದ ಪ್ರಾಯದ ಮಾಜಿ ಕ್ರಿಕೆಟಿಗ ಅಖ್ತರ್, ತಮಗಿಂತಲೂ ಚಿಕ್ಕ ವಯಸ್ಸಿನ ಅದರಲ್ಲಿಯೂ 17 ವರ್ಷ ಅಪ್ರಾಪ್ತೆಯನ್ನು ಮದುವೆಯಾಗುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.