ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿವೃತ್ತ ಡಿಸಿಪಿ ರಾಮಯ್ಯ ಪುತ್ರ ರಾಘವೇಂದ್ರ ಆತ್ಮಹತ್ಯೆ

ನಿವೃತ್ತ ಡಿಸಿಪಿ ರಾಮಯ್ಯ ಅವರ ಮಗ ರಾಘವೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು..

Srinivasa Murthy VN
Updated On : 9 Jun 2014, 5:46 am

ಬೆಂಗಳೂರು: ನಿವೃತ್ತ ಡಿಸಿಪಿ ರಾಮಯ್ಯ ಅವರ ಮಗ ರಾಘವೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್ ನೋಟ್ ಬರೆದಿದ್ದಾರೆ.

ಆರ್.ಟಿ.ನಗರದ ತರಳಬಾಳು ಬಳಿ ರಾಘವೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ತಮ್ಮ ತಂದೆ ರಾಮಯ್ಯ ಅವರ ರಿವಾಲ್ವರ್‌ನಿಂದಲೇ ಗುಂಡುಹಾರಿಸಿಕೊಂಡು ರಾಘವೇಂದ್ರ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಯಶಸ್ವಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ರಾಘವೇಂದ್ರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಡೆತ್‌ನೋಟ್‌ಗಳು ದೊರೆತಿದ್ದು, ತಮ್ಮ ತಂದೆ, ತಾಯಿ, ಹೆಂಡತಿ ಮತ್ತು ಪೊಲೀಸರಿಗೆ ರಾಘವೇಂದ್ರ ಅವರು ಪತ್ರಗಳನ್ನು ಬರೆದಿದ್ದಾರೆ. ಮೂಲಗಳ ಪ್ರಕಾರ ರಾಘವೇಂದ್ರ, ರಿಯಲ್ ಎಸ್ಟೇಟ್ ಮತ್ತು ಮರಳು ವ್ಯವಹಾರದಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ವಿವಿಧ ಮೂಲಗಳಿಂದ ಸಾಕಷ್ಟು ಸಾಲ ಕೂಡ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಇದೇ ಅಂಶಗಳನ್ನು ರಾಘವೇಂದ್ರ ಅವರು ತಮ್ಮ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ಗಳಲ್ಲಿ ಪ್ರಸ್ತಾಪಿಸಿದ್ದ ಅಂಶಗಳು ಇದೀಗ ಬಯಲಾಗಿವೆ. ಅಲ್ಲದೆ ಡೆತ್‌ನೋಟ್‌ನಲ್ಲಿ ನಾಲ್ಕು ಫೋನ್‌ನಂಬರ್‌ಗಳನ್ನು ಕೂಡ ಬರೆದಿದ್ದು, ಇದರಲ್ಲಿ ರಾಘವೇಂದ್ರ ಅವರ ಕಾರು ಚಾಲಕ ಮಂಜುವಿನ ಮೊಬೈಲ್ ನಂಬರ್ ಕೂಡ ಅದರಲ್ಲಿತ್ತು ಎಂದು ಹೇಳಲಾಗುತ್ತಿದೆ.

ವ್ಯವಹಾರದಲ್ಲಿ ಮಾಡಿಕೊಂಡಿದ್ದ ಸಾಲದಿಂದಾಗಿ ತೀವ್ರ ನೊಂದು ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೂ ಪ್ರಕರಣ ದಾಖಲಿಸಿಕೊಂಡಿರುವ ಆರ್‌ಟಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆಗೂ ಮುನ್ನ ರಾಘವೇಂದ್ರ ಅವರು ತಮ್ಮ ತಂದೆ ರಾಮಯ್ಯ, ತಾಯಿ, ಹೆಂಡತಿ ಮತ್ತು ಪೊಲೀಸರಿಗೆ ಒಟ್ಟು ನಾಲ್ಕು ಪತ್ರಗಳನ್ನು ಬರೆದಿದ್ದಾರೆ. ಈ ಪೈಕಿ ಪತ್ರಗಳ ಸಾರಾಂಶ ಮಾಧ್ಯಮಗಳಿಗೆ ಬಹಿರಂಗವಾಗಿವೆ.

ರಾಘವೇಂದ್ರ ಅವರು ತಮ್ಮ ತಂದೆ ರಾಮಯ್ಯ ಅವರಿಗೆ ಬರೆದ ಪತ್ರ ಸಾರಾಂಶ:
ಐ ಆ್ಯಮ್ ಸಾರಿ ಡ್ಯಾಡಿ. ನಾನು ನಿಮಗೆ ಹೇಳದೇ ನಿಮ್ಮ ರಿವಾಲ್ವರ್ ತೆಗೆದುಕೊಂಡು ಹೋಗುತ್ತಿದ್ದೇನೆ. ನಿಮ್ಮ ಸ್ನೇಹಿತ ಉಮೇಶ್‌ಗೆ ಕೊಡಬೇಕಿದ್ದ 4 ಲಕ್ಷ ರುಪಾಯಿಗಳನ್ನು ನಾನು ಉಪಯೋಗಿಸಿಕೊಂಡಿದ್ದೇನೆ. ನಾನು ನಿಮ್ಮ ಹೆಸರು ಬಳಸಿ ಸಾಕಷ್ಟು ಮಂದಿಯಿಂದ ಲಕ್ಷಾಂತರ ರುಪಾಯಿಗಳನ್ನು ಸಾಲಪಡೆದಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ.

ರಾಘವೇಂದ್ರ ಅವರು ಪೊಲೀಸರಿಗೆ ಬರೆದಿದ್ದ ಪತ್ರ ಪ್ರಮುಖಾಂಶಗಳು ಇಂತಿವೆ.

ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಿಮಗೆ ತೊಂದರೆ ಕೊಡುತ್ತಿದ್ದೇನೆ. ದಯಮಾಡಿ ಬೇಸರ ಮಾಡಿಕೊಳ್ಳಬೇಡಿ. ನನ್ನ ಸಾವಿಗೆ ನಾನೇ ಕಾರಣ. ನನ್ನ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿಸಬೇಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement