ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಉಡಾವಣೆ
ಕರ್ನಾಟಕದ ಕಾರವಾರದಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ.
ನವದೆಹಲಿ: ಕರ್ನಾಟಕದ ಕಾರವಾರದಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯನ್ನು ಸೋಮವಾರ ಯಶಸ್ವಿಯಾಗಿ ಉಡಾಯಿಸಲಾಗಿದೆ.
290 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯವಿರುವ ಕ್ಷಿಪಣಿಯನ್ನು ಇಂದು ಕರ್ನಾಟಕದ ಕಾರವಾರ ತೀರದಿಂದ ಯಶಸ್ವಿಯಾಗಿ ಉಡಾಯಿಸಲಾಯಿತು. ಕಾರವಾರದಲ್ಲಿರುವ ಐಎನ್‌ಎಸ್ ಕೋಲ್ಕತಾದ ಸಮರ ನೌಕೆಯಲ್ಲಿರುವ ಉಡಾವಣಾ ವಾಹಕದ ಮೂಲಕವಾಗಿ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. ತನ್ನ ವ್ಯಾಪ್ತಿಯಲ್ಲಿ ಸಂಚರಿಸುವ ಶತ್ರು ಪಾಳಯದ ನೌಕೆಗಳನ್ನು ಕ್ಷಣ ಮಾತ್ರದಲ್ಲಿ ಉಡಾಯಿಸಬಲ್ಲ ಸಾಮರ್ಥ್ಯ ಬ್ರಹ್ಮೋಸ್ ಕ್ಷಿಪಣಿಯಲ್ಲಿದೆ.
ಐಎನ್‌ಎಸ್ ಕೋಲ್ಕತಾ ಸಮರ ನೌಕೆಯನ್ನು ಮಡಗಾವ್ ಡಾಕ್‌ಯಾರ್ಡ್ ಲಿಮಿಟೆಡ್ ಸಂಸ್ಥೆ ನಿರ್ಮಿಸಿದ್ದು, ಶೀಘ್ರದಲ್ಲಿಯೇ ಭಾರತೀಯ ನೌಕಾಪಡೆಗೆ ಐಎನ್‌ಎಸ್ ಕೋಲ್ಕತಾವನ್ನು ಸೇರಿಸಿಕೊಳ್ಳಲಾಗುತ್ತದೆ. ಒಂದೇ ಬಾರಿಗೆ 16 ಬ್ರಹ್ಮೋಸ್ ಕ್ಷಿಪಣಿಗಳನ್ನು ಪ್ರಯೋಗಿಸುವ ಸಾಮರ್ಥ್ಯ ಈ ನೌಕೆಗೆ ಇದ್ದು, ಕ್ಷಣ ಮಾತ್ರದಲ್ಲಿ ಶುತ್ರ ಪಾಳಯದ ನೌಕೆಗಳನ್ನು ಛಿದ್ರ ಮಾಡಲಿದೆ ಎಂದು ಉಡಾವಣೆಯ ನೇತೃತ್ವವಹಿಸಿದ್ದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.