ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕರಾಚಿಯಲ್ಲಿ ಮತ್ತೆ ಉಗ್ರರ ದಾಳಿ: ವಿಮಾನ ಅಪಹರಣಕ್ಕೆ ಯತ್ನ?

ಪಾಕಿಸ್ತಾನದ ಕರಾಚಿಯಲ್ಲಿ ಸತತ ೨ನೇ ಬಾರಿ ಉಗ್ರರು ದಾಳಿ ನಡೆಸಿದ್ದು, ವಿಮಾನವನ್ನು ಹೈಜಾಕ್ ಮಾಡುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ.

Srinivasa Murthy VN
Updated On : 10 Jun 2014, 4:54 am

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದು, ವಿಮಾನವನ್ನು ಹೈಜಾಕ್ ಮಾಡುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ.

ನಿನ್ನೆಯಷ್ಟೇ ಕರಾಚಿಯಲ್ಲಿರುವ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ್ದ ಸುಮಾರು 10 ಉಗ್ರರ ತಂಡ, ಸೈನಿಕರು ಸೇರಿದಂತೆ 13 ಜನರ ಸಾವಿಗೆ ಕಾರಣವಾಗಿತ್ತು. ಸತತ 14 ಗಂಟೆಗಳ ಕಾರ್ಯಾಚರಣೆ ನಡೆಸಿದ್ದ ಪಾಕಿಸ್ತಾನ ಸೇನಾಪಡೆ ಎಲ್ಲ 10 ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿತ್ತು. ಇದಾದ ಕೇವಲ 24 ಗಂಟೆಯಲ್ಲಿ ಮತ್ತೆ ಕರಾಚಿಯಲ್ಲಿ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ.

ಮೂಲಗಳ ಪ್ರಕಾರ ಸುಮಾರು 20ರಿಂದ 25 ಉಗ್ರರ ತಂಡ ಕರಾಚಿ ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ ಸೇನಾ ಆಕಾಡೆಮಿಯ ಮೇಲೆ ದಾಳಿ ನಡೆಸಿದ್ದಾರೆ. ಉಗ್ರರು ಮತ್ತು ಸೇನಾಪಡೆಗಳ ನಡುವೆ ತೀವ್ರ ಗುಂಡಿನ ಕಾಳಗ ನಡೆಯುತ್ತಿದ್ದು, ಉಗ್ರರು ವಿಮಾನ ನಿಲ್ದಾಣಕ್ಕೆ ನುಸುಳಿರುವ ಕುರಿತು ಪಾಕಿಸ್ತಾನ ಮಾಧ್ಯಮಗಳು ವರದಿ ಪ್ರಸಾರ ಮಾಡುತ್ತಿವೆ. ವಿಮಾನವನ್ನು ಹೈಜಾಕ್ ಮಾಡುವ ಉದ್ದೇಶದಿಂದಲೇ ಉಗ್ರರು ಈ ದಾಳಿ ನಡೆಸಿರಬಹುದೆಂದು ಸೇನಾಪಡೆಗಳು ಶಂಕೆ ವ್ಯಕ್ತಪಡಿಸುತ್ತಿವೆ.

ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಸುಮಾರು 20ರಿಂದ 25 ಉಗ್ರರು ಸೇನಾ ಅಕಾಡೆಮಿಯ ಒಳಗೆ ನುಸುಳಿದ್ದು, ಗ್ರೆನೇಡ್, ಆತ್ಮಾಹುತಿ ಬಾಂಬ್‌ಗಳು ಮತ್ತು ರಾಕೆಟ್ ಲಾಂಚರ್‌ಗಳ ಮೂಲಕವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಈ ನಡುವೆ ಸೇನಾ ಆಕಾಡೆಮಿಯಲ್ಲಿ ದಾಳಿ ನಡೆಸುತ್ತಿರುವ ಉಗ್ರರು ಆಕಾಡೆಮಿಯಲ್ಲಿರುವ ತೈಲಾಗಾರದ ಮೇಲೆ ಗ್ರೆನೇಡ್ ಎಸೆದಿದ್ದು, ಗ್ರೆನೇಡ್ ಸ್ಪೋಟದಿಂದಾಗಿ ತೈಲಾಗಾರದಲ್ಲಿ ದಟ್ಟ ಹೋಗೆ ಆವರಿಸಿದೆ ಎಂದು ಹೇಳಲಾಗುತ್ತಿದೆ.

ಕರಾಚಿ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್, ವಿಮಾನಗಳ ಸಂಚಾರ ಸ್ಥಗಿತ
ಇತ್ತ 2ನೇ ಬಾರಿಯೂ ಉಗ್ರರು ದಾಳಿ ನಡೆಸಿರುವ ವಿಚಾರ ತಿಳಿಯುತ್ತಿದ್ದಂತೆಯೇ ಕರಾಚಿಯಲ್ಲಿರುವ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೆ ನಿಲ್ದಾಣದಿಂದ ಹೊರಡುವ ಮತ್ತು ಆಗಮಿಸುವ ಎಲ್ಲ ವಿಮಾನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣವನ್ನು ಸೇನಾಪಡೆಗಳು ಸುತ್ತುವರೆದಿದ್ದು, ಉಗ್ರರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಉಗ್ರರ ದಾಳಿಯನ್ನು ಹತ್ತಿಕ್ಕಿ; ಸೇನೆಗೆ ಪ್ರಧಾನಿ ನವಾಜ್ ಸೂಚನೆ
ಈ ನಡುವೆ ಉಗ್ರರ ದಾಳಿಯನ್ನು ಖಂಡಿಸಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು, ಉಗ್ರರ ದಾಳಿಯನ್ನು ಹತ್ತಿಕ್ಕುವಂತೆ ಸೇನಾಪಡೆಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಆಂತರಿಕ ಭದ್ರತಾ ಅಧಿಕಾರಿಗಳ ತುರ್ತು ಸಭೆ ಕರೆದಿರುವ ನವಾಜ್ ಷರೀಫ್ ಮುಂದಿನ ನಿರ್ಧಾರಗಳ ಕುರಿತು ಚರ್ಚೆ ನಡೆಸಿದ್ದಾರೆ.

ಗುಂಡಿನ ಕಾಳಗದಲ್ಲಿ 3 ಉಗ್ರರ ಹತ್ಯೆ
ಇತ್ತೀಚಿನ ವರದಿ ಬಂದಾಗ ಸೇನಾಪಡೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ 3 ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ಸೇನಾ ಆಕಾಡೆಮಿಯ ಹಾಸ್ಟೆಲ್‌ನಲ್ಲಿ ಅಡಗಿದ್ದ ಮೂವರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾಳಿಯ ಹೊಣೆಹೊತ್ತ ತೆಹ್ರೀಕ್-ಇ-ತಾಲಿಬಾನ್
ಇತ್ತ ದಾಳಿ ವಿಚಾರ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ತಾಲಿಬಾನ್ ಉಗ್ರ ಸಂಘಟನೆ ದಾಳಿಯ ನೇತೃತ್ವವಹಿಸಿದೆ. ಉಗ್ರರ ಹತ್ಯೆಗೆ ವಿರುದ್ಧವಾಗಿ ಈ ದಾಳಿ ನಡೆಸಲಾಗಿದೆ ಎಂದು ತಾಲಿಬಾನ್ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಕರಾಚಿಯ ಜಿನ್ನಾ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ದಾಳಿಯಲ್ಲಿ 10 ಉಗ್ರರು ಸೇರಿದಂತೆ ಸುಮಾರು 36 ಮಂದಿ ಹತರಾಗಿದ್ದರು. ಈ ಪ್ರಕರಣ ನಡೆದು ಕೇವಲ 24 ಗಂಟೆಯೊಳಗೆ ಮತ್ತೊಂದು ದಾಳಿ ನಡೆದಿರುವುದು ಪಾಕಿಸ್ತಾನ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement