ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಂಗಾ ಶುದ್ಧೀಕರಣಕ್ಕೆ ಮುಂದಾದ "ಕೇಂದ್ರ''

ಇನ್ನು ಮುಂದೆ 'ಪವಿತ್ರ' ಗಂಗಾ ನದಿಯಲ್ಲಿ ಅಸ್ಥಿ ವಿರ್ಸರ್ಜನೆ ಮಾಡುವಂತಿಲ್ಲ. ವಿಸರ್ಜನೆ ಮಾಡಿದರೆ ದಂಡ ಅಥವಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

Srinivasa Murthy VN
Updated On : 10 Jun 2014, 5:25 am

ನವದೆಹಲಿ: ಇನ್ನು ಮುಂದೆ 'ಪವಿತ್ರ' ಗಂಗಾ ನದಿಯಲ್ಲಿ ಅಸ್ಥಿ ವಿರ್ಸರ್ಜನೆ ಮಾಡುವಂತಿಲ್ಲ. ವಿಸರ್ಜನೆ ಮಾಡಿದರೆ ದಂಡ ಅಥವಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಗಂಗೆಯಲ್ಲಿ ಅಸ್ಥಿ ಬಿಟ್ಟೀರ ಜೋಕೆ...! ಹೀಗೆಂದು ಕಟ್ಟುನಿಟ್ಟಿನ ಆದೇಶ ಜಾರಿ ಮಾಡ ಹೊರಟಿರುವುದು ಕೇಂದ್ರ ಸರ್ಕಾರ. ಗಂಗಾನದಿ ಶುಚಿತ್ವಕ್ಕಾಗಿ ದಿಟ್ಟ ಹೆಜ್ಜೆ ಇಟ್ಟಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನದಿ ಶುಚಿತ್ವಕ್ಕಾಗಿ ಗಂಗಾ ನದಿ ಸ್ವಚ್ಚತಾ ಮಂಡಳಿ ರಚನೆ ಮಾಡಿದ್ದು, ಶೀಘ್ರದಲ್ಲಿಯೇ ಈ ಕುರಿತು ಕಾಯ್ದೆ ಜಾರಿ ಮಾಡುವುದಾಗಿ ಹೇಳಿದೆ.

ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರ ನೇತೃತ್ವದಲ್ಲಿ ಗಂಗಾ ಸ್ವಚ್ಚತಾ ಮಂಡಳಿ ರಚನೆ ಮಾಡಿದ್ದು, ನದಿ ಶುಚಿತ್ವದ ಮೇಲ್ವಿಚಾರಣೆಯನ್ನು ಸ್ವಚ್ಚತಾ ಮಂಡಳಿಯೇ ನೋಡಿಕೊಳ್ಳಲಿದೆ. ಹೀಗಾಗಿ ನದಿ ತಟದಲ್ಲಿ ಯಾವುದೇ ಕಾಮಗಾರಿ ಅಥವಾ ಶುಚಿತ್ವ ಕಾಮಗಾರಿ ಕೈಗೊಳ್ಳುವ ಮುನ್ನ ಮಂಡಳಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೆ ನದಿಗೆ ಅಸ್ಥಿ ಬಿಡುವುದು, ಶವಗಳನ್ನು ವಿಸರ್ಜನೆ ಮಾಡುವುದನ್ನು ಕೂಡ ನಿಷೇಧಿಸಲಾಗುತ್ತದೆ.

ಪವಿತ್ರ ಗಂಗೆಯಲ್ಲಿ ಸ್ತಾನ ಮಾಡುವುದನ್ನು ಹೊರತು ಪಡಿಸಿದರೆ ನದಿಯಲ್ಲಿ ಉಗುಳುವುದು, ಬಟ್ಟೆ ತೊಳೆಯುವುದು ಕೂಡ ನಿಷೇಧವಾಗಿದೆ. ಒಂದು ವೇಳೆ ಮಂಡಳಿಯ ನಿಯಮಾವಳಿಗಳನ್ನು ಮೀರಿ ನದಿಗೆ ಅಸ್ಥಿ ಮತ್ತು ಶವಗಳನ್ನು ವಿಸರ್ಜಿಸಿದರೆ, ನದಿಯಲ್ಲಿ ಉಗುಳಿದರೆ ಅಥವಾ ಬಟ್ಟೆ ತೊಳೆದರೆ ಅಂತಹವರಿಗೆ 10 ಸಾವಿರ ರು.ಗಳ ವರೆಗೆ ದಂಡ ಅಥವಾ 3 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಲು ಮಂಡಳಿ ಮುಂದಾಗಿದೆ.

ಅಂತೆಯೇ ನದಿಗೆ ಕಲ್ಮಷಗಳನ್ನು ಬಿಡುವ ಸಂಸ್ಥೆಗಳ ಅಥವಾ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದ್ದು, ಗಂಗೆಯ ಶುಚಿತ್ವಕ್ಕಾಗಿ ಕೇಂದ್ರ ಸರ್ಕಾರ ನೂತನ ಕಾಯ್ದೆಯೊಂದನ್ನು ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಬಂದರು ಇಲಾಖೆ, ಜಲಸಂಪನ್ಮೂಲ ಇಲಾಖೆ ಮತ್ತು ಪರಿಸರ ಇಲಾಖೆ ಸೇರಿದಂತೆ ಒಟ್ಟು ನಾಲ್ಕು ಇಲಾಖೆಗಳನ್ನು ಒಗ್ಗೂಡಿಸಿ ಮಂಡಳಿ ರಚನೆ ಮಾಡಲಾಗುತ್ತದೆ.

ಈ ಹಿಂದೆ ಲೋಕಸಭಾ ಚುನಾವಣೆಗೆ ಮೊದಲು ವಾರಣಾಸಿ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ಗಂಗಾನದಿಯನ್ನು ಸ್ವಚ್ಚಗೊಳಿಸುವ ಭರವಸೆ ನೀಡಿದ್ದರು. ಪ್ರಧಾನಿಯಾದ ಬಳಿಕ ಭರವಸೆ ಈಡೇರಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಮೋದಿ, ಇದಕ್ಕಾಗಿ ಗಂಗಾ ಶುಚಿತ್ವ ಮಂಡಳಿ ರಚನೆ ಮಾಡಿದ್ದಾರೆ. ಗಂಗಾನದಿ ಶುಚಿತ್ವ ಯೋಜನೆ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದ್ದು, ಅವರು ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement